
ಪ್ರೀತಿಯ ಅಪ್ಪ,
" ಮನಸ್ಸಿನ ಭಾವನೆಗಳನ್ನು ಹೊರಹಾಕಲು ಬರವಣಿಗೆ ಸರಿಯಾದ ವೇದಿಕೆ" ನೀವೇ ಹೇಳುತ್ತಿದ್ದ ಮಾತಿದು. ಎಷ್ಟೋ ದಿನಗಳಿಂದ ಭಾವನೆಗಳನ್ನು ಹೊರಹಾಕಬೇಕೆಂದಿದ್ದೆ.ಆಗಿರಲಿಲ್ಲ.ಇಂದು ಅಂತಹದ್ದೊಂದು ಸಾಕಸಕ್ಕೆ ಕೈ ಹಾಕುತ್ತಿದ್ದೇನೆ.ನನ್ನೆಲ್ಲ ಭಾವನೆಗಳನ್ನು ನೋಡುತ್ತಿದ್ದಂತೆ ಅರ್ಥ ಮಾಡಿಕೊಳ್ಳುತ್ತಿದ್ದವರು ನೀವು.ಇಂದು ನಿಮ್ಮಿಂದ ಎಷ್ಟೋ ದೂರದಲ್ಲಿದ್ದೇನೆ.ನಿಮ್ಮೊಂದಿಗೆ ಕಳೆದ ಆ ಸುಂದರ ದಿನಗಳ ಮೆಲುಕು ಹಾಕುತ್ತಿರುತ್ತೇನೆ.ನಿಮ್ಮ ಜೊತೆ ನಾನು ಮಾಡುತ್ತಿದ್ದ ಚೇಷ್ಟೆ ಗಳು ,ನಿಮಗೆ ಕೊಡುತ್ತಿದ್ದ ಕಾಟ ಇವೆಲ್ಲ ಕಣ್ಣ ಮುಂದೆ ಹಾಗೆ ನಡೆದಂತಿದೆ .ನನಗೆ ಗೊತ್ತು ನೀವು ಇದನ್ನೆಲ್ಲಾ ನಿಮ್ಮ ನೆನಪಿನ ಪೆಟ್ಟಿಗೆಯಲ್ಲಿ ಬೆಚ್ಚಗೆ ಬಚ್ಚಿತ್ತಿದ್ದೀರಿ ಎಂದು.ನನಗೆ ಗೊತ್ತಿರುವಂತೆ ಪಿಯುಸಿ ಮುಗಿಯುವವರೆಗೆ ನಾನು ನಿಮ್ಮ ಬಿಟ್ಟು ಎಲ್ಲೂ ಹೋದವಳಲ್ಲ.ಅದೇನೋ ಇದ್ದಕ್ಕಿದ್ದಂತೆ ನಾನು ಹೊರಗೆ ಹೋಗಿ ಓದಬೇಕು ಎಂಬ ಆಸೆ ತುಂಬಾ ಇತ್ತು.ನಿಮ್ಮ ಅಭಿಪ್ರಾಯ ಕೇಳಿದಾಗ ಮನೆಯಿಂದಲೇ ಓದಬಹುದಲ್ಲ ಎಂದಿದ್ದಿರಿ. ಮೊದಲ ಭಾರಿಗೆ ನಿಮ್ಮ ಮಾತನ್ನು ತಳ್ಳಿಹಾಕಿದ್ದೆ.ನನಗೆ ಗೊತ್ತು ನನ್ನ ಒಂದು ಕಣ್ಣಿನ ಬಿಂದು ಸಾಕು ನಿಮ್ಮ ಮನ ಒಲಿಸಲು ಎಂದು ಅದರ ಪ್ರಯೋಗದಿಂದ ಸಫಲಳಾಗಿದ್ದೆ ಕೂಡ .ಆ ದಿನ ನಿಮ್ಮನ್ನು ಬಿಟ್ಟು ಹೊರಟಾಗ ನಿಮ್ಮ ಕಣ್ಣಲ್ಲಿ ಕಣ್ಣೀರು.ನಿಮಗನಿಸಿರಬಹುದು ಮಗಳು ಕೈ ತಪ್ಪಿ ಹೋಗುತ್ತಿರಬಹುದ ಎಂದು . ನನಗಾಗೆಲ್ಲ ಆಶ್ಚರ್ಯವಾಗುತ್ತಿತ್ತು.ನನಗೇಕೆ ಈ ಅಳು ಬರುವುದಿಲ್ಲ ಎಂದು . ನಕ್ಕುಬಿಟ್ಟಿದ್ದೆ.ನನಗಾಗ ಅನಿವಾರ್ಯವಾಗಿತ್ತು.ಕೆಲವೊಮ್ಮೆ ನಿಮ್ಮ ಅತಿಯಾದ ಕಾಳಜಿಯಿಂದ ನಿಮ್ಮ ಮೇಲೆ ಕೋಪ ಮಾಡಿಕೊಂಡದ್ದು ಇದೆ.ಆದರೆ ಈಗ ನಿಮ್ಮ ಕಾಳಜಿಯ ಬೆಲೆ ತಿಳಿಯುತ್ತಿದೆ. ನಿಮ್ಮನ್ನು ಬಿಟ್ಟು ನನ್ನವನೊಂದಿಗೆ ಹೊರಟಾಗ ಆ ಎಲ್ಲ ದಿನಗಳು ನೆನಪಾಗಿತ್ತು .ನಿಮ್ಮ ಕಣ್ಣೀರ ಧಾರೆಗೆ ನಕ್ಕುಬಿಡುವೆ ಎಂದುಕೊಂಡಿದ್ದೆ.ಆದರೆ ಆ ದಿನ ನೀವು ಸಂತೋಷದಿಂದ ನನ್ನ ತಲೆಸವರಿ "ಅಪ್ಪನ ಹಾರೈಕೆಗಳು ನಿನ್ನೊಂದಿಗಿದೆ ಮಗಳೇ" ಎಂದಾಗ ಆ ಸಾಂತ್ವನದಿಂದ ದೂರಾಗುತ್ತಿದ್ದೇನಲ್ಲ ಎಂದು ಕಣ್ಣೀರ ತಡೆಯಲಾಗಲೇ ಇಲ್ಲ.ನಿಮ್ಮ ಆ ಕಾಳಜಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ .
ಪ್ರೀತಿಯಿಂದ ,
ನಿಮ್ಮ ಮಗಳು .
No comments:
Post a Comment