ಪ್ರೀತಿಯ ಅಪ್ಪ
ನಿನಗೊಂದು ಪತ್ರ ಬರೆಯಬೇಕು ಎಂಬುದು ಬಹಳ ದಿನಗಳ ಆಸೆ. ಮೊದಲೆಲ್ಲಾ ಹಾಸ್ಟೆಲ್ ನಲ್ಲಿದ್ದುಕೊಂಡು ಕಾಲೇಜ್ ಓದುತ್ತಿದ್ದಾಗ ಆಗಾಗ ಮನೆಗೆ ಪತ್ರ ಬರೆಯುತ್ತಿದ್ದೆ. ಫೋನ್ ಇದ್ದರೂ ಆ ಪತ್ರ ಬರೆಯುವುದರಲ್ಲೇ ಏನೋ ಸಂತೋಷ ಸಿಗುತ್ತಿತ್ತು. ಈಗ ದೇಶ ಬಿಟ್ಟು ವಿದೇಶದಲ್ಲಿದ್ದಾಗಿದೆ ಪತ್ರ ಬರೆಯುವ ಅವಕಾಶವೇ ಇಲ್ಲ. ಆಗಾಗ ಒಂದು ಫೋನ್ ಮಾಡಿ ಕುಶಲೋಪರಿ ವಿಚಾರಿಸಿ ಬಿಟ್ಟರೆ ಆಯಿತು. ಅದೆಷ್ಟೋ ಹೇಳಬೇಕು ಎಂದುಕೊಂಡ ಮಾತುಗಳು ಕೇವಲ ನಿಟ್ಟುಸಿರಲ್ಲೇ ನಿಂತು ಹೋಗುತ್ತದೆ. ಈ ಪತ್ರದಲ್ಲಾದರೆ ಹಾಗಲ್ಲ ಏನು ಬರೆಯಬೇಕು ಎಂದುಕೊಂಡಿದ್ದೆವೋ ಅದನ್ನು ಮನಸ್ಸಿನಲ್ಲಿದ್ದಂತೆಯೇ ಬರೆದು ಮುಗಿಸಿಬಿಡಬಹುದು. ಮನಸ್ಸಿಗೂ ನಿರಾಳ. ಏನೋ ಒಂದು ರೀತಿ ನೆಮ್ಮದಿ. ಆಡಿದ ಮಾತುಗಳು ಮರೆಯಬಹುದು ಆದರೆ ಬರೆದ ಅಕ್ಷರಗಳು ಅಷ್ಟು ಸುಲಭವಾಗಿ ಮಾಸಲಾರದು. ನೀನೂ ಹಾಗೆಯೆ ಮತ್ತೆ ಮತ್ತೆ ಮಗಳು ಬರೆದ ಪತ್ರ ತೆಗೆದು ಓದಬಹುದು .
ನನ್ನ ಬಾಲ್ಯದಲ್ಲಿ ನಾನೆಂದೂ ನಿನ್ನ ಬಿಟ್ಟು ಎಲ್ಲೂ ಹೋಗುತ್ತಿರಲಿಲ್ಲ. ಅಪ್ಪನ ಮುದ್ದಿನ ಮಗಳು ನಾನು. ಈಗಲೂ ಊರಿಗೆ ಹೋದಾಗ ಹೊರಡುವಾಗ ಅಪ್ಪನನ್ನು ಬಿಟ್ಟು ಬರುವುದು ಎಂದರೆ ಅದೇನೋ ಸಂಕಟ. ಅದೇನೋ ಕಸಿವಿಸಿ. ಮನಸ್ಸಿನ ತುಂಬಾ ನೋವು. ತವರು ಎಂದರೆ ಹಾಗೆಯೇ ತಾನೇ ? ಪ್ರತಿಯೊಬ್ಬ ಹೆಣ್ಣು ಅನುಭವಿಸುವ ವೇದನೆ ಇದು . ಅದೇನೇ ಇರಲಿ ನೀ ನನಗೆ ನೀಡಿದ ಅದ್ಬುತ ಬಾಲ್ಯವನ್ನು ನಾನೆಂದಿಗೂ ಮರೆಯಲಾರೆ. ಬಾಲ್ಯದಲ್ಲಿ ಆ ಸಂಪಿಗೆ , ಕವಳಿ , ಪರಿಗೆ , ಮುಳ್ಳನ್ನು,ಗುಡ್ಡೆ ಗೇರು , ಹಲಗೆ ಹಣ್ಣು , ನೇರಳೆ ಹಣ್ಣು ಹೀಗೆ ಮಲೆನಾಡಿನ ತರಾವರಿ ಹಣ್ಣುಗಳನ್ನು ನನಗಾಗಿ ನೀನು ತಂದು ಕೊಡುತ್ತಿದ್ದುದ್ದು ಇಂದಿಗೂ ಹಸಿರಾಗಿದೆ. ಅವುಗಳೆಲ್ಲ ಇಂದು ಕೇವಲ ನೆನಪು ಮಾತ್ರ. ಈ ಬಾರಿ ಊರಿಗೆ ಬಂದಾಗ ನನ್ನ ಪುಟ್ಟ ಮಗನನ್ನು ಕರೆದುಕೊಂಡು ನಮ್ಮೂರಿನ ಬೆಟ್ಟ ಅಲೆದು ಅವನಿಗೂ ಅದರ ಸವಿಯನ್ನು ನೀಡಬೇಕು.
ಅದೇನೋ ನನ್ನ ಮಗನನ್ನು ನೋಡಿದಾಗಲೆಲ್ಲಾ ನನ್ನ ಬಾಲ್ಯ ಬಹಳ ಕಾಡುತ್ತದೆ. ನಿನ್ನೆ ತಾನೇ ಹುಟ್ಟಿದಂತಿದ್ದ ಮಗ ಆಗಲೇ ಒಂದು ವರ್ಷ ಪೂರೈಸಿಬಿಟ್ಟ. ಅವನ ನಗು ತುಂಟತನ , ಬೀಳದಂತೆ ಜಾಗರೂಕನಾಗಿ ಇಡುವ ಆ ಪುಟ್ಟ ಹೆಜ್ಜೆ, ಹಾಡು ಎಂದರೆ ಆಆ ಎನ್ನುವ ಪರಿ,ಅದರ ಜೊತೆಗೆ ನೀಡುವ ಮುಗ್ಧ ನಗು , ಟಿವಿ ಯಲ್ಲಿ ಬರುವ ಹಾಡಿಗೆ ಆತ ಕುಣಿಯುವ ಪರಿ ,ಅವನ ತೊದಲು ನುಡಿ ಇವೆಲ್ಲವುಗಳನ್ನು ನೋಡುತ್ತಿದ್ದರೆ ಅದೆಷ್ಟು ಆನಂದ. ನನಗೆ ಕಾಡುವುದು ಒಂದೇ ಮಕ್ಕಳು ಬೇಗ ಬೆಳೆದು ದೊಡ್ಡವರಾಗಿ ಬಿಡುತ್ತಾರೆ , ನಮ್ಮನ್ನು ಬಿಟ್ಟು ದೂರವೂ ಹೋಗಿ ಬಿಡುತ್ತಾರೆ , ಅದೇ ನಾನು ನಿಮ್ಮನ್ನು ಬಿಟ್ಟು ಬಂದಂತೆಯೇ!. ಎಲ್ಲಾ ಇದ್ದು ಇಲ್ಲದಿದ್ದಂತೆ ಎಲ್ಲೋ ಕಾಣದ ದೇಶಕ್ಕೆ, ವಿದೇಶಕ್ಕೆ. ಮಕ್ಕಳಿಗಿಂತ ಮೊಮ್ಮಕ್ಕಳು ಹೆಚ್ಚು ಎಂಬ ಮಾತು ಅಮ್ಮ ಯಾವಾಗಲೂ ಹೇಳುತ್ತಿರುತ್ತಾಳೆ ಆದರೆ ಆ ಆನಂದವನ್ನು ಕೇವಲ ವರ್ಷಕ್ಕೊಮ್ಮೆ ಸವಿಸಲು ಸಿಗುವಂತಾಗಿರುವುದು ವಿಷಾದವೇನೋ ಎಂದು ಒಮ್ಮೊಮ್ಮೆ ಎನ್ನಿಸಿಬಿಡುತ್ತದೆ. ಅದೇನೇ ಇರಲಿ ಬಂದುದನ್ನು ಬಂದಂತೆ ಅನುಭವಿಸಿಕೊಂಡು ಹೋಗುವುದೇ ಜೀವನ. ಅವನ ಫೋಟೋ ನೋಡಿಕೊಂಡು , ಅಥವಾ ಫೋನ್ ನಲ್ಲಿ ಅವನ ಧ್ವನಿ ಕೇಳಿ ಸಂತೋಷಪಡುವಷ್ಟಾದರೂ ಅವಕಾಶ ಇರುವುದಕ್ಕೆ ಧನ್ಯವಾದ ಹೇಳಿ ಸಮಾಧಾನ ಮಾಡಿಕೊಳ್ಳಬೇಕಷ್ಟೆ.
ಇದೇ ಜೂನ್ ೧೯ ರಂದು ಅಪ್ಪಂದಿರ ದಿನವಂತೆ ಅದಕ್ಕೆ ನಿನಗೆ ಮುಂಚಿತವಾಗಿ ಶುಭಾಷಯ ಕೋರಿಬಿಡುತ್ತೇನೆ. ನಾ ಎಲ್ಲಿದ್ದರೂ ಸುಖವಾಗಿರಲೆಂಬ ನಿನ್ನ ಆಶೀರ್ವಾದ ಸದಾ ಹೀಗೇ ಇರಲಿ ಮತ್ತು ಮಕ್ಕಳ ಸಂತೋಷದಲ್ಲೇ ನೆಮ್ಮದಿ ಕಾಣುವ ನೀನು ಮತ್ತು ಅಮ್ಮ ಯಾವಾಗಲೂ ನಗುನಗುತ್ತಿರುವಂತಾಗಲಿ .
ಇಂತಿ ನಿನ್ನ ಪ್ರೀತಿಯ ಮಗಳು
No comments:
Post a Comment