ಈ ದಿನ ಉಳಿದೆಲ್ಲ ದಿನಗಳಿಗಿಂತ ಭಿನ್ನ , ಈಗಿನ್ನೂ ಇಲ್ಲಿ ಬೆಳಗಿನ ಮುಂಜಾವು. ಹಾಸಿಗೆ ಹೊದ್ದು ನನ್ನ ಪುಟ್ಟ ಕಂದನ ಜೊತೆ ಬೆಚ್ಚಗೆ ಮಲಗಬೇಕಾದ ನಾನು ಅದೇನೋ ಎಂದಿಲ್ಲದ ಉತ್ಸಾಹದಿಂದ ಎದ್ದು ಕುಳಿತುಬಿಟ್ಟಿದ್ದೇನೆ. ಹೌದು ಅದಕ್ಕೊಂದು ಕಾರಣವಿದೆ. ಇಲ್ಲೀಗ ಧಾರಾಕಾರ ಮಳೆ. ಕಳೆದ ಐದಾರು ವರ್ಷಗಳಲ್ಲಿ ಎಂದೂ ಕಾಣದಂತಹ ಮಳೆ. ಈ ಲಂಡನ್ ನಲ್ಲಿ ಮಳೆ ಬಂದರೆ ಜಿಟಿಜಿಟಿ ಎರಡು ಹನಿ ಹಾಕಿ ಹೋಗಿ ಬಿಡುತ್ತದೆ. ಇದೊಂದು ಮಳೆ ಎಂದು ಅನಿಸುವುದೇ ಇಲ್ಲ. ಹಾಗಿರುವಾಗ ಹೀಗೆ ಥೇಟ್ ನಮ್ಮ ಮಲೆನಾಡಿನಂತೆ ಬೋರ್ ಗರೆದು ಮಳೆ ಬರುವುದೆಂದರೆ ? ಹೌದು ಎಷ್ಟು ಉಲ್ಲಾಸ , ಮನಸ್ಸು ಗರಿಬಿಚ್ಚಿ ಕುಣಿಯುವುದು ಎಂದರೆ ಇದೇ ಇರಬೇಕು , ಇಂದು ಎಲ್ಲಿಲ್ಲದ ಉತ್ಸಾಹ ಬಂದು ಬಿಟ್ಟಿದೆ.
ಮುಂಜಾನೆಯೇ ಎದ್ದು ಈ ಬೋರ್ಗರೆಯುವ ಮಳೆಯನ್ನು ಕಿಟಕಿಯಿಂದ ನೋಡುತ್ತಾ ಕುಳಿತುಬಿಟ್ಟಿದ್ದೇನೆ. ಅದರ ಜೊತೆಗೆ ಬಾಲ್ಯ , ನಮ್ಮ ಅಪ್ಪಟ ಹಸಿರು ತುಂಬಿದ ,ಮಳೆಗಾಲದಲ್ಲಿ ಕೆಸರು ತುಂಬಿದ ಮಣ್ಣಿನ ಸುಗಂಧ ಬೀರುವ ಮಲೆನಾಡು ಕಾಡುತ್ತಿದೆ. ನಮ್ಮ ಮಲೆನಾಡಿನ ಮಳೆ ಅದೆಷ್ಟು ಸುಂದರ. ಅದು ಮಾಡುವ ಮೋಡಿಯೇ ಹಾಗೆ , ಒಂದೇ ಸಮನೆ ಸುರಿಯುವ ಆ ಮಳೆಗೆ ಇರುವ ಆಕರ್ಷಣೆ ಬೇರಾವುದಕ್ಕೂ ಇಲ್ಲ.
ನಾವು ಚಿಕ್ಕವರಿರುವಾಗ ಬೇಸಿಗೆ ಮುಗಿಯುತ್ತಿದ್ದಂತೆ ಒಮ್ಮೆ ವಿಪರೀತ ಶೆಕೆ ಎಂದು ಕುಳಿತಾಗ ಬೀಳುವ ಆ ಮಳೆ ಇಳೆಗೂ ಮನಸ್ಸಿಗೂ ಎಷ್ಟು ತಂಪು ನೀದುತ್ತಿತ್ತಲ್ಲ ಅದನ್ನು ಈಗ ನೆನಪಿಸಿಕೊಂಡರೆ ಆಹ್ಲಾದವೆನಿಸುತ್ತದೆ. ಉರಿಬಿಸಿಲಿನಲ್ಲಿ ಹೇಗೆ ಆಡುತ್ತಿದೆವೋ ಹಾಗೆಯೇ ಘೋರವಾಗಿ ಸುರಿಯುವ ಮಳೆಯಲ್ಲಿಯೂ ಮೈ ನೆನೆಸಿಕೊಂಡು ಆನಂದಿಸುತ್ತಿದ್ದ ಬಗೆ ಇನ್ನೂ ಮನದಲ್ಲಿ ಹಚ್ಚಹಸಿರು. ಅದು ಹೇಗೋ ಮಳೆ ಎಂದರೆ ಏನೋ ಒಂದು ವಿಶೇಷ ಆಕರ್ಷಣೆ. ಹಸಿರು ತುಂಬಿದ ಮನೆಯ ಹಿಂಬಾಗ ಬೆಟ್ಟ ಗುಡ್ಡಗಳಲ್ಲಿ ಉಂಬಳ ಕಾಲಿಗೆ ಕಚ್ಚಿ ರಕ್ತ ಹೀರುತ್ತಿದ್ದರೂ ಲೆಕ್ಕಿಸದೆ ಅಡ್ಡಾಡುತ್ತಿದ್ದ ಪರಿ ಎಷ್ಟು ಸೊಗಸು. ಜೊತೆಗೆ ಅಲ್ಲಿ ಸಿಗುವ ಕೌಳಿ,ಪರಿಗೆ , ಮುಳ್ಳನ್ನು , ಸಂಪಿಗೆ ಹಣ್ಣು , ಹಲಗೆ ಹಣ್ಣು ಹೀಗೆ ಲೆಕ್ಕವಿಲ್ಲದಷ್ಟು ಹಣ್ಣುಗಳನ್ನು ತಿನ್ನುತ್ತಿದ್ದುದು ನೆನಪಿಗೆ ಬರುತ್ತಿದೆ. ಈಗ ಅವೆಲ್ಲ ಕೇವಲ ನೆನಪುಗಳಷ್ಟೇ. ಈಗ ಈ ಹಣ್ಣುಗಳು ಸಿಕ್ಕರೂ ಅದನ್ನು ಕೊಯ್ದು ತಿನ್ನಲು ನಾವಲ್ಲಿ ಇಲ್ಲ ಎಂಬುದೇ ಬೇಸರ. ಅದಕ್ಕೆಂದೇ ತೀರ್ಮಾನಿಸಿದ್ದೇನೆ. ಈ ಭಾರಿ ಮಳೆಗಾಲದಲ್ಲೇ ಭಾರತಕ್ಕೆ ಹೋಗಬೇಕು. ನಮ್ಮ ಮಲೆನಾಡಿನ ಬೆಟ್ಟ ಗುಡ್ಡಗಳಲ್ಲಿ ಸುತ್ತಾಡಿ ಬರಬೇಕು. ಬೋರ್ ಗರೆಯುವ ಮಳೆಯನ್ನೂ ನೋಡಿ ಆನಂದಿಸಬೇಕು. ಸಾಕೆನಿಸುವಷ್ಟು ಮಳೆಯಲ್ಲಿ ಕುಣಿದು ಕುಪ್ಪಳಿಸಿ ಬರಬೇಕು.
Arpitha Harsha
London