Thursday, 29 November 2012

ಹೆಸರುಬೇಳೆ ವಡೆ


ಹೆಸರು ಬೇಳೆ ಎಲ್ಲರ ಮನೆಯಲ್ಲೂ ಇದ್ದೆ ಇರುತ್ತದೆ ಈ ಚಳಿಯಲ್ಲಿ ಬಿಸಿಬಿಸಿ ಯಾಗಿ ತಿನ್ನುವುದೆಂದರೆ ಯಾರಿಗೆ ತಾನೇ ಇಷ್ಟವಾಗೋಲ್ಲ ಹೇಳಿ . ಹಾಗಾಗಿ ಇಲ್ಲಿದೆ ನೋಡಿ ಹೆಸರುಬೇಳೆ ವಡೆ . ತಯಾರಿಸುವುದು ಕೂಡ ಅಷ್ಟೇ ಸುಲಭ .

ಬೇಕಾಗುವ ಸಾಮಗ್ರಿಗಳು :
ಹೆಸರುಬೇಳೆ - 1 ಕಪ್ 
ಬೆಳ್ಳುಳ್ಳಿ -1 ಎಸಳು 
ಶುಂಟಿ - 1 ಇಂಚು 
ಕಡಲೆಹಿಟ್ಟು -3 ಚಮಚ 
ಕೆಂಪು ಮೆಣಸಿನ ಪುಡಿ - 1 ಚಮಚ 
ಜೀರಿಗೆ ಪುಡಿ - ಅರ್ದ ಚಮಚ 

ಹೆಸರುಬೇಳೆಯನ್ನು 3-4 ಗಂಟೆಗಳ ಕಾಲ ನೆನೆಸಿಡಬೇಕು .
ಬೆಳ್ಳುಳ್ಳಿ ಶುಂಟಿ ನೆನೆಸಿಟ್ಟ ಹೆಸರುಬೇಳೆಯನ್ನು ನೀರುಬೆರೆಸದೆ ರುಬ್ಬಿಕೊಳ್ಳಬೇಕು . 
ನಂತರ ಇದಕ್ಕೆ ಕಡಲೆಹಿಟ್ಟು, ಕೆಂಪು ಮೆಣಸು, ಜೀರಿಗೆ ಪುಡಿ ಬೆರೆಸಬೇಕು 
ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಈ ಹಿಟ್ಟನ್ನು ಸೌಟಿನಿಂದ ಹಾಕಿ ಕಾರಿದರೆ ಹೆಸರುಬೇಳೆ  ವಡ  ರೆಡಿ  .

Wednesday, 28 November 2012

ಮನಸ್ಸೆಂಬ ಚಿಟ್ಟೆ

ಈ ನನ್ನ ಕವನವು ೦೪.೦೨.೧೩ ರ ಪಂಜುವಿನಲ್ಲಿ ಪ್ರಕಟಗೊಂಡಿದೆ http://www.panjumagazine.com/?p=462


ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ 
ನೋಡಲು ಕಣ್ಣುಗಳು ಸಾಲದು
ಮೈಯ ಮೇಲೆಲ್ಲಾ ಕಪ್ಪು ಕಂಗಳು
ನೋಡುಗರ ಕಣ್ಮನ ಸೆಳೆಯುವುದು 

ಅಲ್ಲಿಂದಿಲ್ಲಿಗೆ ಹಾರುವೆ 
ಹಿಡಿಯಲು ಹೋದರೆ ಓಡುವೆ 
ಜಗದ ಸೃಷ್ಟಿಯ ಮೆಚ್ಚಲೇ ಬೇಕು 
ನಿನಗೆ ನೀನೆ ಸಾಟಿಯಿರಬೇಕು 

ಒಮ್ಮೆ ಇಲ್ಲಿ ಒಮ್ಮೆ ಇನ್ನೆಲ್ಲೋ 
ಹಾರುವ ನಿನ್ನನು ನೋಡಿದರೆ 
ಮನಸು ಕೂಡ ನಿನ್ನೊಡನೆಯೇ 
ಕುಣಿಯುತ ಹೊರಡುವುದು ಬೇರೆಡೆಗೆ !!



Thursday, 12 July 2012

ಬಂಧನವಾಗದಿರಲಿ ಹೆಣ್ಣು ನೋಡುವ ಸಂಪ್ರದಾಯ

ಕೆಲವು ಸಂಪ್ರದಾಯಗಳನ್ನು ಬಿಟ್ಟುಕೊಡಲು ಹಿರಿಯರು ತಯಾರಿರುವುದಿಲ್ಲ ಇದರಿಂದ ಮಗಳ ಮನಸ್ಸಿಗೆ ನೋವಾಗುವುದು ಎಂಬ ಬಗ್ಗೆ ಗಮನ ಹರಿಸುವುದೇ ಇಲ್ಲ .ಗೆಳತಿಯೊಬ್ಬಳಲ್ಲಿ ಮದುವೆಯ ಬಗ್ಗೆ ಕೇಳಿದಾಗ "ನನಗಂತೂ ಮದುವೆ ಆಗಬೇಕೆಂಬ ಆಸೆಯೇ ಹೊರಟುಹೋಗಿದೆ ಬಂದವರ ಮುಂದೆ ಅಲಂಕಾರ ಮಾಡಿ ಕುಳಿತುಕೊಂಡು ಬೇಸರ ಆಗಿಬಿಟ್ಟಿದೆ " ಹೀಗೆ ಉತ್ತರ ಬಂತು.ಇದು ಕೇವಲ ಒಬ್ಬರ ಉತ್ತರವಲ್ಲ ಈಗಿನ ಸಾಕಷ್ಟು ಹೆಣ್ಣು ಮಕ್ಕಳ ಅಭಿಪ್ರಾಯ ಅದರಲ್ಲೂ ಹಳ್ಳಿ ಕಡೆಗಳಲ್ಲಿ ಈ ಸಂಪ್ರದಾಯಗಳು ಇನ್ನು ಮುಂದುವರೆದುಕೊಂಡು ಹೋಗುತ್ತಿರುವುದು ನಿಜಕ್ಕೂ ಆಶ್ಚರ್ಯವೇ ಸರಿ. 
ಹೌದು ಈಗಲೂ ಕೂಡ ಎಷ್ಟೋ ಮನೆಗಳಲ್ಲಿ ಮಗಳನ್ನು ಅಲಂಕರಿಸಿ ಗಂಡಿನವರ ಎದುರು ಕೂರಿಸಿವ ಸಂಪ್ರದಾಯವಿದೆ .ಆದರೆ ಪ್ರತಿ ಭಾರಿಯೂ ಹೀಗೆ ಬಂದವರ ಮುಂದೆ ಕುರಿಸುವುದಕ್ಕಿಂತ ಮೊದಲೇ ವಿಚಾರಿಸಿ ಫೋಟೋ  ನೋಡಿ ಸಂಭಂದ ಗಳು ಎರಡು ಕಡೆಯಲ್ಲಿ  ಒಪ್ಪಿಗೆ ಇದ್ದಲ್ಲಿ ಮುಂದುವರೆದರೆ ಹೆಣ್ಣು ಮತ್ತು ಗಂಡು ಯಾರ ಮನಸ್ಸಿಗೂ ಕೂಡ ಘಾಸಿಯಾಗದು .
ಹೆಣ್ಣು ಮಗಳು ವಯಸ್ಸಿಗೆ ಬರುತ್ತಿದ್ದಂತೆ ಮದುವೆ ಮಾಡಿ ಬಿಡಬೇಕೆಂಬ  ಆತುರ ಎಲ್ಲ ತಂದೆ ತಾಯಿಯರಲ್ಲೂ ಇದ್ದೆ ಇರುತ್ತದೆ ಆದರೆ ಮಗಳ ಬಗ್ಗೆ ಒಮ್ಮೆ ಯೋಚಿಸಿ . ವರನನ್ನು ಹುಡುಕುವ ಮೊದಲು ಮಗಳಿಗೆ ಇಷ್ಟವಿದೆಯೋ ಇಲ್ಲವೋ ಎಂಬ ಬಗ್ಗೆ ಒಮ್ಮೆ ಗಮನಹರಿಸಿ. ಯಾವ ರೀತಿಯ ವರ ಬೇಕು ಎಂಬುದನ್ನು ಅವರಲ್ಲೇ ಕೇಳಿಬಿಟ್ಟರೆ ಹುಡುಕುವುದು ಸುಲಭವಾಗುತ್ತದೆ. ಜಾತಕ ಕೊಡುವಾಗ ೧೦-೧೫ ಕಡೆ ಒಟ್ಟಿಗೆ ಕೊಟ್ಟು ಎಲ್ಲರನ್ನು ಮನೆಗೆ ಕರೆಸಿ ಮಗಳನ್ನು ಎಲ್ಲರ ಮುಂದೆ ಅಲಂಕರಿಸಿ ಕೂರಿಸಿ ನಂತರ ಬೇಡ ವೆಂದಾಗ ಮಗಳ ಮನಸ್ಸಿಗೆ ಸಾಕಷ್ಟು ಘಾಸಿ ಆಗಬಹುದು ಎಂಬುದರ ಬಗ್ಗೆ ಗಮನವಿರಲಿ.
ಹಾಗೆಯೇ ಕೆಲವೊಮ್ಮೆ ಗಂಡು ಕೂಡ ಇಷ್ಟವಿಲ್ಲದೆ ತಂದೆ ತಾಯಿಯರ ಒತ್ತಾಯಕ್ಕಾಗಿ ಹೆಣ್ಣನ್ನು ನೋಡಲು ಬರುವ ಸಂಧರ್ಭಗಳು ಕೂಡ ಸಾಕಷ್ಟಿವೆ . ಇಷ್ಟವಿಲ್ಲದಿದ್ದರೆ ಮೊದಲೇ ಕಡಾಖಂಡಿತವಾಗಿ ತಿಳಿಸಿಬಿಡಿ ಹುಡುಗಿ ನೋಡಲು ಹೋಗಿ ಆಕೆಯ ಭಾವನೆಗೆ ಧಕ್ಕೆಯುಂಟು ಮಾಡುವುದು ಸರಿಯಲ್ಲ.
ಒಬ್ಬರನ್ನೊಬ್ಬರು ನೋಡದೆಯೇ ತೀರ್ಮಾನ ತೆಗೆದುಕೊಲ್ಲಲಾಗದು ನಿಜ ಆದರೆ ಹಾಗೆ ನೋಡಲೇಬೇಕಾದ ಸಂದರ್ಭದಲ್ಲಿ ೧-೨ ಜನ ಮಾತ್ರ ಸೇರಿ ನೋಡಿ ನಂತರ ಮುಂದಿನ ತೀರ್ಮಾನ ಕೈಗೊಳ್ಳುವುದು ಸೂಕ್ತ .ಇಲ್ಲದಿದ್ದರೆ ಮದುವೆ ಯಾ ಬಗ್ಗೆ ಮದುವೆಯಾಗುವ ಮೊದಲೇ ಬಂಧನವಾಗಿ ಕಾಣಬಹುದು .
ಹಳೆಯ ಸಂಪ್ರದಾಯವನ್ನು ಬಿಡಬಾರದು ಎಂಬ ಹಟದಲ್ಲಿ ಈ ರೀತಿ  ಮಾಡುವುದರಿಂದಾಗಿ ಎಷ್ಟೋ ಹೆಣ್ಣು ಮಕ್ಕಳು ಮದುವೆ ಆಗಬೇಕೆಂಬ ಭಾವನೆಯಿಂದ ಹೊರಬರುವಂತಾಗಿದೆ . ಇದರ ಬಗ್ಗೆ ಪೋಷಕರ ಗಮನ ಹರಿಸಿದಲ್ಲಿ ಸಾಕಷ್ಟು ಹೆಣ್ಣುಮಕ್ಕಳು ಸಂತೋಷಪಡಬಹುದು .

ಕನವರಿಕೆ

ಮನದ ಮೂಲೆಯಲ್ಲೆಲ್ಲೋ ನೆನಪುಗಳ
ಚಡಪಡಿಕೆ
ಬೇಸರ ಕಳೆಯಲು ನಿನ್ನದೇ ಹಾಡಿನ
ಸಾಲುಗಳ ಗುನುಗುನಿಸುವಿಕೆ
 ಹಗಲು ಇರುಳು ನಿನದೆ ಕನವರಿಕೆ
ಸಾಕು ನಿನ್ನ ಅಗಲುವಿಕೆ
ಬಾ ಬೇಗ ಸನಿಹಕೆ .

-ಅರ್ಪಿತಾ ಹರ್ಷ
 

Thursday, 28 June 2012

ಕೇಂಬ್ರಿಡ್ಜ್- ಪ್ರವಾಸಿ ಕಥನ

ಕೇಂಬ್ರಿಡ್ಜ್ ಹೆಸರು ಕೇಳದವರಾರಿಲ್ಲ?  ಜಗತ್ಪ್ರಸಿದ್ಧಿ ಪಡೆದ ಕೇಂಬ್ರಿಡ್ಜ್ ನಲ್ಲಿ ಓದುವ ಅವಕಾಶವಂತು ಸಿಗಲಿಲ್ಲ ನೋಡುವ ಅವಕಾಶ ಇರುವಾಗ ಬಿಡಬಾರದೆಂದು ತೀರ್ಮಾನಿಸಿ ಕೇಂಬ್ರಿಡ್ಜ್ ಗೆ ಇತ್ತೀಚಿಗೆ ಹೋಗಿದ್ದೆವು.ಲಂಡನ್ ನಿಂದ  ಕೇಂಬ್ರಿಡ್ಜ್ ಗೆ ಸುಮಾರು ೮೦ ಕಿಲೋಮೀಟರ್ . ಕೇಂಬ್ರಿಡ್ಜ್ ಅನ್ನು ಒಂದು ದಿನದಲ್ಲಿ ನೋಡಿ ಮುಗಿಸಬಹುದು. ಹಾಗೆ ನಾವು ಹೊರಟಿದ್ದು ಒಂದು ವೀಕೆಂಡ್ ನಲ್ಲಿ. ಕೇಂಬ್ರಿಡ್ಜ್  ಯುನೈಟೆಡ್ ಕಿಂಗ್ಡಮ್ ನಲ್ಲಿರುವ ಒಂದು ಪುಟ್ಟ ಸಿಟಿ . ಇಲ್ಲಿ ಎಲ್ಲಿ ನೋಡಿದರು ಕಾಲೇಜು ಗಳು .ಕೇಂಬ್ರಿಡ್ಜ್ ಕಾಲೇಜುಗಳಿಗೆ ಹೆಸರುವಾಸಿ ನಿಜ ಆದರೆ ಇದೊಂದು ಪ್ರವಾಸಿ ತಾನವಾಗ್ ಮಾರ್ಪಟ್ಟಿದೆ .
ಕೇಂಬ್ರಿಡ್ಜ್ ನಲ್ಲಿ ಸ್ಟೇಜ್ ಕೋಚ್ ಬಸ್ ಇದೆ ಇದರಲ್ಲಿ ಒಮ್ಮೆ ಟಿಕೆಟ್ ತೆಗೆದುಕೊಂಡರೆ ಬೆಳಗಿನಿಂದ ಸಂಜೆಯವರೆಗೆ ಎಲ್ಲಿ ಬೇಕಾದರೂ ಸುತ್ತಬಹುದು ಇದರಲ್ಲಿ  ಕೇಂಬ್ರಿಡ್ಜ್ ನ ನೋಡಬೇಕಾದ ಪ್ರವಾಸಿ ತಾಣಗಳಿಗೆ ಕರೆದುಕೊಂಡು ಹೋಗಲಾಗುತ್ತದೆ ಜೊತೆಗೆ ಗೈಡ್ ಕೂಡ ನೀಡಲಾಗುತ್ತದೆ. ಹೀಗೆ ನಾವು ಮೊದಲು ಹೋದ ಸ್ಥಳವೆಂದರೆ ಕೇಂಬ್ರಿಡ್ಜ್ ಬಟಾನಿಕಲ್ ಗಾರ್ಡನ್ ಇದೊಂದು ಅದ್ಭುತ ಉದ್ಯಾನವನ ಇಡೀ ಉದ್ಯಾನವನವನ್ನು ಸರಿಯಾಗಿ  ನೋಡಲು ಅರ್ಧ ದಿನವೇ ಬೇಕಾಗಬಹುದು.೧೮೪೬ ರಲ್ಲಿ ಇದನ್ನು ತೆರೆಯಲಾಯಿತು ಇಲ್ಲಿ ಒಳಹೊಕ್ಕರೆ ವಿವಿಧ ಬಗೆಯ, ವಿವಿದ ಬಣ್ಣಗಳ ಹೂಗಳನ್ನು ಕಾನವಹುದು ಜೊತೆಗೆ ಕೊಳ ಮತ್ತು ಕಾರಂಜಿಯನ್ನು ಒಳಗೊಂಡಿದೆ ಇದು ಒಂಬತ್ತು ರಾಷ್ಟ್ರಗಳ ಬೇರೆಬೇರೆ ರೀತಿಯ ಗಿಡಗಳ ಸಂಗ್ರಹವನ್ನು ಒಳಗೊಂಡಿರುವುದು ಇಲ್ಲಿಯ ವಿಶೇಷವೆ ಸರಿ. ಸ್ಟೇಜ್ ಕೋಚ್ ಬಸ್ ನಲ್ಲಿಯೇ ಇದರ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ಅಲ್ಲಿಂದ ೧೫ ನಿಮಿಷಗಳ ಬಸ್ ಪ್ರಯಾಣದ ನಂತರ ನಮಗೆ ಸಿಗುವುದೇ ಅಮೆರಿಕನ್ ಸೇಮೆಟರಿ. ೧೯೫೬ರಲ್ಲಿ ಇದನ್ನು ಸ್ಥಾಪಿಸಲಾಯಿತು .೨ ನೆ ಮಹಾಯುದ್ದದಲ್ಲಿ ಮಡಿದ ಅಮೆರಿಕನ್ ಸೈನಿಕರ ಸ್ಮರಣಾರ್ಥವಾಗಿ ಇದನ್ನು ನಿರ್ಮಿಸಲಾಗಿದೆ ಇದರ ಜೊತೆಗೆ ಇಲ್ಲಿ ಮೆಮೋರಿಯಲ್ ಕೂಡ ಕಟ್ಟಲಾಗಿದ್ ಇದನ್ನು ಪೋರ್ಟ್ ಲ್ಯಾಂಡ್ ಕಲ್ಲಿನಿಂದ ಕೆತ್ತಲಾಗಿದೆ . ಸುತ್ತಲು ಹಸಿರಿನಿಂದ ಕೂಡಿದ ಈ ಪ್ರದೇಶದ  ಮಧ್ಯದಲ್ಲಿ  ಸಾವಿರಾರು ಹುತಾತ್ಮರ  ಗೋರಿಯನ್ನು ನೋಡಬಹುದು .
ಇಲ್ಲಿಂದ ಸುಮಾರು ೧೦ ನಿಮಿಷಗಳ ಬಸ್ ಪ್ರಯಾಣಿಸಿದರೆ ಸಿಗುವುದೇ ಪಂಟಿಂಗ್ ಇದು ಕೇಂಬ್ರಿಡ್ಜ್ ನ ಆಕರ್ಷಕ ಸ್ಥಳ ಕೇಂಬ್ರಿಡ್ಜ್ ಗೆ ಬಂದವರು ಪಂಟಿಂಗ್ ಮಾಡದೆ ಹಿಂದಿರುಗುವುದಿಲ್ಲ.ಕೇಂಬ್ರಿಡ್ಜ್ ನ  ಪ್ರಸಿದ್ಧಿ ಪಡೆದ ವಿಶ್ವವಿಧ್ಯಾಲಯಗಳ ಹಿಂಬದಿಯಲ್ಲಿ ಒಂದು ಹರಿಯುವ ಕೊಳವನ್ನು ನಿರ್ಮಿಸಲಾಗಿದೆ ಬೋಟ್ ಹುಟ್ಟು ಹಾಕಲು ಅಭ್ಯಾಸವಿದ್ದಲ್ಲಿ ನಾವೇ ಬೋಟ್ ನಡೆಸಿಕೊಂಡು ಹೋಗಬಹುದು ಅದಿಲ್ಲದಿದ್ದಲ್ಲಿ ೪೫ ನಿಮಿಷಗಳ ಬೋಟ್ ಟ್ರಿಪ್ ಗೆ ಹೋಗಬಹುದು  ಇದರ ಜೊತೆ ಗೈಡ್ ಕೂಡ ನೀಡಲಾಗುತ್ತದೆ. ಕ್ವೀನ್ಸ ಕಾಲೇಜಿನಿಂದ ಪ್ರಾರಂಭಿಸಿ ಕಿಂಗ್ಸ್ ಕಾಲೇಜ್ ,ಟ್ರಿನಿಟಿ ಕಾಲೇಜ್, ಮತ್ತು ಸೈಂಟ್ ಜೋನ್ಸ್ ಕಾಲೇಜ್ ಗಳವರೆಗೆ ಎಲ್ಲ ಕಾಲ್ಲೆಗೆಗಳನ್ನು ಕೂಡ ನೋಡಬಹುದು. ಇದರಲ್ಲಿ ಟ್ರಿನಿಟಿ ಕಾಲೇಜ್ ಪ್ರಪಂಚದಲ್ಲೇ ಅತ್ಯಂತ ದುಭಾರಿ ಕಾಲೇಜ್ ಎಂಬುದು ಅಲ್ಲಿ ಸಿಕ್ಕ ಮಾಹಿತಿ. ಜೊತೆಗೆ ಇದು ಅತ್ಯಂತ ವಿಶಾಲವಾದ ಕಾಲೇಜ್ ಕೂಡ ಹೌದು. ಇದರ ಒಳ ಭಾಗದಲ್ಲಿ ಚರ್ಚ್ ಕೂಡ ಇದೆ . ೨೦ನೆ ಶತಮಾನದಲ್ಲಿ ಇಲ್ಲಿ ಓದಿದ ೩೧ ಜನರಿಗೆ ನೊಬೆಲ್ ಪ್ರಶಸ್ತಿ ದೊರೆತಿದೆ ಎಂಬುದು ಟ್ರಿನಿಟಿ ಕಾಲೇಜ್ ನ ಹೆಮ್ಮೆ.  ೧೨ ನೆ ಶತಮಾನದಲ್ಲಿ ಮೊದಲ ಭಾರಿಗೆ ಕೇಂಬ್ರಿಡ್ಜ್ ವಿಶ್ವವಿಧ್ಯಾಲಯ ವನ್ನು ಸ್ಥಾಪಿಸಲಾಯಿತು. ಪೀಟರ್ ಹೌಸ್ ಎಂಬುದು ಮೊತ್ತ ಮೊದಲು ಪ್ರಾರಂಭವಾದ ಕಾಲೇಜ್ ಎಂಬುದು ಇಲ್ಲಿ ಸಿಕ್ಕ ಮಾಹಿತಿ.೧೨೪೮ರಲ್ಲಿ ಮೊದಲ ಕಾಲೇಜ್ ಪ್ರಾರಂಭವಾಗಿದೆ. ಇದಲ್ಲದೆ ಕಿಂಗ್ಸ್ ಮತ್ತು ಸೈಂಟ್ ಜೋನ್ಸ್ ಕಾಲೇಜು ಗಳು ಕೂಡ ಅಷ್ಟೇ ಪ್ರಖ್ಯಾತಿಯನ್ನು ಪಡೆದಿದೆ.ಹೀಗೆ ಒಂದರ ಪಕ್ಕದಲ್ಲಿ ಒಂದು ಎಂಬಂತೆ ೪-೫ ಕಾಲೇಜ್ ಗಳನ್ನೂ ನೋಡಬಹುದು. ೧೨-೧೩ ನೆ ಶತಮಾನದ ಅತಿ ಪ್ರಾಚೀನ ಕಟ್ಟಡಗಳು ಇಂದಿಗೂ ಹಾಗೆಯೇ ಇರುವುದು ವಿಶೇಷತೆ ಎನಿಸದಿರದು.ಆರಂಭದಲ್ಲಿ ಕೇಂಬ್ರಿಡ್ಜ್ ನಲ್ಲಿ ಕೇವಲ ಪುರುಷರಿಗೆ ಮಾತ್ರ ಓದುವ ಅವಕಾಶವಿತ್ತು ೧೮೬೯ ರಲ್ಲಿ ಮೊದಲ ಭಾರಿಗೆ ಗ್ರಿತನ್ ಕಾಲೇಜ್ ನಲ್ಲಿ ಮಹಿಳೆಯರಿಗೆ ವಿದ್ಯಾಭ್ಯಾಸದ ಅವಕಾಶ ಕಲ್ಪಿಸಲಾಯಿತು ಜೊತೆಗೆ ಜಗತ್ಪ್ರಸಿದ್ಧಿ ಹೊಂದಿರುವುದರಲ್ಲಿ ಮೆಚ್ಚೆಲೇ ಬೇಕಾದ ಸಂಗತಿ. ಜೊತೆಗೆ ೪೫ ನಿಮಿಷಗಳ ಪಂಟಿಂಗ್ ಕುಶಿ ಕೊಡುವುದಂತೂ ನಿಜ. ಪಂಟಿಂಗ್ ಕೇಂಬ್ರಿಡ್ಜ್ ನ ಜನಪ್ರಿಯತೆಯನ್ನು ಹೆಚ್ಚಿಸಿದೆ .ಇಲ್ಲಿ ಬಂದವರೆಲ್ಲರೂ ಎಲ್ಲಿ ಹೋಗಲಾಗದಿದ್ದರೂ  ಕೇಂಬ್ರಿಡ್ಜ್ ನ ಬೋಟಿಂಗ್ ನಲ್ಲಿ ಹೋಗಿ ಎಲ್ಲ ಕಾಲೇಜ್ ಗಳನ್ನೂ ನೋಡಿ ಬರುತ್ತಾರೆ. ಪ್ರತಿ ಕಾಲೇಜ್ ನ ಲೈಬ್ರರಿಗಳು ಕೂಡ ಅಷ್ಟೇ ಪ್ರಸಿದ್ಧಿ ಪಡೆದಿದೆ.


.
ಇಲ್ಲಿಂದ ೧೦ ನಿಮಿಷಗಳ ಅಂತರದಲ್ಲಿ ರೌಂಡ್ ಚರ್ಚ್ ಎಂಬ ಚರ್ಚ್ ಇದೆ ಇದು ಕೇವಲ
ಕೇಂಬ್ರಿಡ್ಜ್ ನಲ್ಲೆ ಅಲ್ಲ ಇಂಗ್ಲೆಂಡ್ ನಲ್ಲೆ ೨ ನೆಯ ಅತಿ ಹಳೆಯ ಕಟ್ಟಡ ಎನ್ನಲಾಗಿದೆ. ಹೆಸರೇ ಹೇಳುವಂತೆ  ಕಲ್ಲಿನಿಂದ ಕೆತ್ತಿದ ವೃತ್ತಾಕಾರದ ಚರ್ಚ್ ಇದು. ಇದು ಕೂಡ ಇಲ್ಲಿನ ಪ್ರಸಿದ್ಧ ಚರ್ಚ್ ಆಗಿದೆ .ಫಿಟ್ಸ್ ವಿಲಿಯಂ ಮ್ಯೂಸಿಯಂ ಇಲ್ಲಿಯ ಮತ್ತೊಂದು ಆಕರ್ಷಣೆ. ಇಲ್ಲಿ ಪ್ರತಿ ತಿನ್ಗಲಿನಲ್ಲು ಬೇರೆ ಬೇರೆ ರೀತಿಯ ವಸ್ತು ಪ್ರದರ್ಶನವನ್ನು ನೀಡಲಾಗುತ್ತದೆ ಹೆಚ್ಚಾಗಿ ಕಲ್ಲಿನಿಂದ ಮಾಡಿದ ವಿವಿದ ರೀತಿಯ ವಿಗ್ರಹಗಳನ್ನು ಕಾಣಬಹುದು  .
ಕ್ವೀನ್ಸ ಕಾಲೇಜ್ ನ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹೋಗಲು ಒಂದು ಬ್ರಿಡ್ಜ್ ಅನ್ನು ಕಟ್ಟಲಾಗಿದೆ ಅದನ್ನು ಮ್ಯಾತಮೆಟಿಕಾಲ್  ಬ್ರಿಡ್ಜ್ ಎಂದು ಕರೆಯಲಾಗುತ್ತದೆ. ಇದನ್ನು ತ್ರಿಬುಜಾಕಾರದಲ್ಲಿ ಮರದ ಕೋಲನ್ನು ಉಪಯೋಗಿಸಿ ಗಣಿತ ಶಾಸ್ತ್ರದ ಪ್ರಕಾರ ಎಷ್ಟೇ ಭಾರವಾದರೂ ಸಹಿಸುವಂತೆ ಬಲಯುತವಾಗಿ ಕಟ್ಟಲಾಗಿದೆ ಆದ್ದರಿಂದ ಇದಕ್ಕೆ ಈ ಹೆಸರು ಬಂದಿದೆ ಎಂಬುದು ಇಲ್ಲಿ ಸಿಗುವ ಮಾಹಿತಿ .



ಒಟ್ಟಾರೆಯಾಗಿ ಒಂದು ದಿನದಲ್ಲಿ ನೋಡಿ ಮುಗಿಸಬಹುದಾದ ಮನಸ್ಸಿಗೆ ಮುದ ನೀಡುವ ತಾಣ ಕೇಂಬ್ರಿಡ್ಜ್ .




Wednesday, 20 June 2012

ಬೇಸ್ತು ಬೀಳಿಸಿದ ಕಾಲೇಜಿನ ಮೊದಲ ದಿನ


ಈ ನನ್ನ ಲೇಖನವು ೬/೬/೨೦೧೨ ರ ವಿಜಯ ನೆಕ್ಸ್ಟ್ ನಲ್ಲಿ ಪ್ರಕಟಗೊಂಡಿದೆ  http://www.vijayanextepaper.com/svww_zoomart.php?Artname=20120706a_019101003&ileft=39&itop=701&zoomRatio=130&AN=20120706a_019101003



ಹೈ ಸ್ಕೂಲ್ ಮುಗಿದ ನಂತರ ಕಾಲೇಜಿಗೆ ಸೇರಿದಾಗ ಊರಿನಲ್ಲೇ ಕಾಲೇಜಿಗೆ ಹೋಗುತ್ತಿದ್ದ ಸಿನಿಯರ್ಸ್ ಕಾಲೇಜಿನಲ್ಲಿ ಹುಡುಗರು ಹಾಗಿರುತ್ತಾರೆ ಹೀಗಿರುತ್ತಾರೆ ಎಂದು ಹೇಳುತ್ತಿದ್ದರು ಹಾಗೆ ನಾನು ಸೇರಿದ್ದ ಕಾಲೇಜು ಮನೆಯಿಂದ ಹತ್ತಿರವೇ ಇದ್ದದ್ದರಿಂದ ನಮ್ಮ ಹಳ್ಳಿಯ ಎಲ್ಲ ಸೀನಿಯರ್ಸ್ ಅದೇ ಕಾಲೇಜಿನಲ್ಲಿ ಓದುತ್ತಿದ್ದರು .ನಮ್ಮ ಪಕ್ಕದಮನೆಯ ಅಕ್ಕ ಹಿಂದಿನ ವರ್ಷದಲ್ಲಿ ಕಾಲೇಜಿಗೆ ಮೊದಲಭಾರಿ ಸೇರಿದ್ದರು .ಕಾಲೇಜಿನ ಮೊದಲ ದಿನ ಒಬ್ಬ ಹುಡುಗ ಒಂದು ಪುಸ್ತಕವನ್ನು ಹಿಡಿದು ಒಳ ಬಂದಾಗ ಲೆಕ್ಚರರ್ ಎಂದು ತಿಳಿದು ಎದ್ದು ನಿಂತಿದ್ದೆವು ಆ ನಂತರ ನಿಜವಾದ ಲಕ್ಚರರ್ ಬಂದಾಗಲೇ ಗೊತ್ತಾಗಿದ್ದು ಅವನು ನಮ್ಮನ್ನು ಬೇಸ್ತು ಬೀಳಿಸಲು ಮಾಡಿದ ನಾಟಕವೆಂದು ಎಂದು ಹೇಳಿ ಆ ದಿನ ನಡೆದ ಘಟನೆಯ ವಿವರ ನೀಡಿ ನಾವೆಲ್ಲಾ ಸೇರಿ ನಕ್ಕಿದ್ದೆವು , ನೀನು ಕೂಡ ಹುಷಾರಾಗಿರು ಒಮ್ಮೊಮ್ಮೆ ಸೀನಿಯರ್ಸ್ ಸುಳ್ಳು ಹೇಳಿ ಎಲ್ಲರನ್ನು ನಗುವಂತೆ ಮಾಡುತ್ತಾರೆ ಎಂದು ಬುದ್ದಿ ಹೇಳಿದ್ದಳು .
ಸರಿ ನಾನು ಮೊದಲ ದಿನ ಹೋದ ಸ್ವಲ್ಪ ಸಮಯದಲ್ಲೇ ಇನ್ನು ತರಗತಿ ಪ್ರಾರಂಭವಾಗುವ ಮೊದಲೇ ಒಬ್ಬರು ಒಂದು ನೋಟ್ ಬುಕ್ ಹಿಡಿದು ಬಂದರು ನನಗೆ ಅಕ್ಕ ಹೇಳಿದ್ದು ನೆನಪಿನಲ್ಲಿದ್ದದ್ದರಿಂದ ಎದ್ದು ನಿಲ್ಲದೆ ಸುಮ್ಮನೆ ಕುಳಿತಿದ್ದೆ .ಉಳಿದವರೆಲ್ಲರೂ ಎದ್ದು ನಿಂತಿದ್ದರು . ನನಗೆ  ಮನದಲ್ಲಿ ಕುಶಿಯಾಗಿತ್ತು ಇವರೆಲ್ಲರೂ ಬೇಸ್ತು ಬೀಳುತ್ತಿದ್ದಾರೆ ನಾನು ಬೀಳಲಿಲ್ಲ ಎಂದು ,ಆದರೆ ಬಂದವರು ನಿಜವಾಗಿಯೂ ಲಕ್ಚರರ್ ಆಗಿದ್ದರು ಎಂದು ಅವರು ತಮ್ಮ ಪರಿಚಯ ಮಾಡಿಕೊಂಡಾಗ ತಿಳಿಯಿತು . ಸಧ್ಯ ಅವರು ನಾನು ಎದ್ದು ನಿಲ್ಲದಿದ್ದ ಬಗ್ಗೆ ಗಮನಹರಿಸಿಲ್ಲದಿದ್ದರಿಂದ ನಾನು ಬಚಾವ್ ಆಗಿದ್ದೆ .ಈ ಭಾರಿ ನಾನು ಕೂಡ ಬೇಸ್ತು ಬಿದ್ದಿದ್ದೆ .



ಅರ್ಪಿತಾ ಹರ್ಷ

Tuesday, 19 June 2012

ಅಮರ ಮಧುರ ಸ್ನೇಹ

ಈ ನನ್ನ ಲೇಖನವು ಅವಧಿ ಮ್ಯಾಗಜಿನ್ ನಲ್ಲಿ ಪ್ರಕಟಗೊಂಡಿದೆ  http://avadhimag.com/?p=55895

ಆಕೆ ನನಗೆ ಬಹಳ ಆತ್ಮೀಯ ಗೆಳತಿ ಬಹಳ ದಿನಗಳ ವರೆಗೆ ಒಟ್ಟಿಗೆ ಕೆಲಸ ಮಾಡಿದವರು ನಾವು . ಇಬ್ಬರು ಸದಾಕಾಲ ನಗುತ್ತ , ಮಾತನಾಡುತ್ತ ಮುಂದಿನ ದಿನಗಳ ಬಗ್ಗೆ ಯೋಚಿಸುತ್ತ ಕಳೆದ ದಿನಗಳು ಬಹಳ. ಅನಿವಾರ್ಯ ಕಾರಣದಿಂದ ಕೆಲಸ ಬಿಟ್ಟು ಹೋಗಿದ್ದರಿಂದ ಫೋನ್ ಕೂಡ ಮಾಡದ ಪರಿಸ್ಥಿತಿ ಬಂದೊದಗಿತ್ತು. ಸುಮಾರು ಒಂದು ವರೆ ವರ್ಷದ ನಂತರ ಮತ್ತೊಮ್ಮೆ ಫೋನ್ ಮಾಡಿದಾಗ ಆಕೆಗಾದ ಸಂತೋಷ ನೋಡಿ ಇಷ್ಟು ದಿನ ಫೋನ್ ಮಾಡದೆ ಏನೋ ಒಂದು ವಸ್ತುವನ್ನು ನಾನೇ ಕೈಯಾರೆ ಮಿಸ್ ಮಾಡಿಕೊಂಡಂತೆ ಅನಿಸಿತ್ತು. ಸುಮಾರು ಒಂದು ಗಂಟೆ ಹಳೆಯ ಸುಂದರ ದಿನಗಳ ಮೆಲುಕು ಹಾಕಿದೆವು ಆ ದಿನಗಳು ಮತ್ತೆ ಬರಲಾರದು ನಿಜ ಆದರೆ ಅಂತಹ ದಿನಗಳ ನೆನಪೇ ಎಷ್ಟೊಂದು ಸಂತೋಷ ನೀಡುತ್ತದೆ ಎಂದು ಮತ್ತೆ ಮತ್ತೆ ನೆನಪಿಸಿಕೊಂಡೆವು.
ಇಷ್ಟೆಲ್ಲಾ ಪೀಠಿಕೆ ಏಕೆಂದರೆ ಸುಮ್ಮನೆ ಕುಳಿತು ಯೋಚಿಸುತ್ತಿದ್ದೆ ಹಿಂದೆ ಕಳೆದ ದಿನಗಳು ಯಾವಾಗಲು ಸುಮಧುರ . ಅಂತಹ ಸುಮಧುರ ದಿನಗಳಿಗೆ ಕಾರಣರಾದವರು ನಿಜಕ್ಕೂ ಮಧುರ. ಸ್ನೇಹಿತರು ಎಲ್ಲಿ ಹೋದರು ಸಿಕ್ಕಿಯಾರು ಹೊಸ ಸ್ನೇಹ ಮಾಡಿಕೊಲ್ಲುವುದೇನು ಕಷ್ಟದ ಕೆಲಸವಲ್ಲ ಆದರೆ ಮಾಡಿಕೊಂಡ ಸ್ನೇಹವನ್ನು ಉಳಿಸಿಕೊಳ್ಳುವುದು ಬಹಳ ಕಷ್ಟ .ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ದೂರವಾಗಬೇಕಾಗುತ್ತದೆ. ಇನ್ನು ಕೆಲವೊಮ್ಮೆ ನಾವೇ ಕಾರಣ ಹುಡುಕಿ ದೂರವಾಗಿಬಿಡುತ್ತೇವೆ. ಕೆಲವೊಮ್ಮೆ ಬೇರೆ ಕೆಲಸ ಕ್ಕೆ ಸೇರಿದರೆ ಅಥವಾ ಮದುವೆ ಆಗಿ ಬೇರೆ ಸ್ಥಳಗಳಿಗೆ ಹೋದರೆ ಹೀಗೆ ನಾನಾ ಕಾರಣಗಳಿಗೆ ದೂರವಾಗುವುದುಂಟು . ಆದರೆ ಈಗ ಮೊಬೈಲ್ ಎನ್ನುವುದು ಹಳ್ಳಿಗಳಲ್ಲೂ ಕೂಡ ಎಲ್ಲರ ಮನೆಗಳಲ್ಲೂ ಇದ್ದೆ ಇರುತ್ತದೆ. ಪ್ರತಿ ದಿನ ಫೋನ್  ಮಾಡಲಾಗದಿದ್ದರೂ ತಿಂಗಳಿಗೊಮ್ಮೆಯಾದರೂ ಆತ್ಮೀಯ ಸ್ನೇಹಿತರಿಗೆ ಫೋನ್ ಮಾಡುತ್ತಿರಬೇಕು ಇದರಿಂದ ಬಾಂಧವ್ಯ ಯಾವತ್ತು ಮುರಿದುಬೀಳುವುದಿಲ್ಲ. ಆ ಗೆಳತಿ ಎಲ್ಲಿ ಹೋದಳೋ ಹೇಗಿದ್ದಾಳೋ ಎಂಬ ಯೋಚನೆ ಇರುವುದಿಲ್ಲ. ಹಳೆಯ ಸ್ನೇಹ ಯಾವತ್ತಿಗೂ ಗಟ್ಟಿ . ಬಾಲ್ಯದಿಂದಲೂ ಬೆಳೆದು ಬಂದ ಸ್ನೇಹ ಎಂದಿಗೂ ನೆನಪಿರುವನ್ತದ್ದು .ಇಂತಹ ಸ್ನೇಹ ಗಟ್ಟಿ ಕೂಡ .ನಮ್ಮ ಜೀವನದ ಪ್ರತಿಹಂತದಲ್ಲೂ ಸ್ನೇಹಿತರು ಬೇಕೇ ಬೇಕು . ಕಷ್ಟ ಸುಖ ಹಂಚಿಕೊಳ್ಳಲು ಸ್ನೇಹಿತರೆ ಬೇಕು . ಕೇವಲ ಕಷ್ಟದ ಕಾಲದಲ್ಲಿ ಸಹಾಯ ಪಡೆದು ಮರೆತುಬಿಡುವುದು ಸೂಕ್ತವಲ್ಲ . ಈಗಂತೂ ಫೇಸ್ ಬುಕ್ ,ಮೊಬೈಲ್ ,ಸ್ಕೈಪ್ , ಹೀಗೆ ಸಾಕಷ್ಟು ಅವಕಾಶಗಳಿವೆ ಸ್ನೇಹವನ್ನು ಉಳಿಸಿಕೊಳ್ಳಲು ಮತ್ತು ಬೆಳೆಸಿಕೊಳ್ಳಲು ಆದ್ದರಿಂದ ಸ್ನೇಹವನ್ನು ಉಳಿಸಿಕೊಳ್ಳೋಣ .ಬೆಳೆಸಿಕೊಳ್ಳೋಣ .ಸ್ನೇಹ ಅವಶ್ಯಕತೆಗೆ ಮಾತ್ರವಾಗಿರದೆ
  ಅಮರವಾಗಿರಲಿ .




ಅರ್ಪಿತಾ ಹರ್ಷ .