Friday, 11 November 2011

ಶಂಕರನಾಗ್ ಕನಸು ನನಸಾಗಿದೆ


ಹೊನ್ನಾವರದ ನಾಗರಕಟ್ಟೆ ಎಂಬಲ್ಲಿ ಹುಟ್ಟಿ ಬೆಳೆದ ಶಂಕರನಾಗ್ , ತಮ್ಮ ಗಡಸು ಧ್ವನಿ , ಸೂಕ್ಷ್ಮ ಕಣ್ಣು , ಗಡ್ಡ ಬೆಳೆದ ಮುಖ ಇದರಿಂದಲೇ ಜನರ ಮನ ಸೆಳೆದ ವ್ಯಕ್ತಿ. ಬದುಕಿದ್ದ ಕೇವಲ ಮೂವತ್ತಾರು ವರ್ಷಗಳಲ್ಲಿ ಸಾಧನೆಯ ಶಿಖರವನ್ನೇರಿದವರು. ಕೇವಲ ನಟ ಮಾತ್ರವಲ್ಲದೆ ನಿರ್ದೇಶಕರು ಆಗಿ ಜನ ಮೆಚ್ಚುಗೆ ಗಳಿಸಿದವರು.ಹುಟ್ಟುಭಾಷೆ ಕೊಂಕಣಿಯಾದರು ಕನ್ನಡವನ್ನು ಬಹುಬೇಗ ರೂಡಿಸಿಕೊಂಡವರು. ಕರಾಟೆ ಕಿಂಗ್ ಆಟೋ ರಾಜ ಎಂದು ಜನಪ್ರಿಯ ಗೊಂಡವರು.ನಾಟಕದಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರನ್ನು ಬೆಳಕಿಗೆ ತರುವಲ್ಲಿ ಗಿರೀಶ್ ಕಾರ್ನಾಡ್ ರ ಪಾತ್ರವಿದೆ.ಗಿರೀಶ್ ಕಾರ್ನಾಡ ನಿರ್ದೇಶನದ "ಒಂದಾನೊಂದು ಕಾಲದಲ್ಲಿ" ಶಂಕರ ರ ಮೊದಲ ಚಲನಚಿತ್ರ.ಈ ಚಿತ್ರಕ್ಕೆ ಪ್ರಶಸ್ತಿ ಕೂಡ ಲಭಿಸಿತ್ತು. ಅಲ್ಲಿಂದ ಪ್ರಾರಂಭ ಇವರ ಸಾಧನೆ."ಮಿಂಚಿನ ಓಟ" "ನೋಡಿಸ್ವಾಮಿ ನಾವಿರೋದೆ ಹೀಗೆ","ಗೀತ""ಒಂದು ಮುತ್ತಿನ ಕತೆ" ಇವೆಲ್ಲ ಇವರದೇ ನಿರ್ದೇಶನದ ಚಲನಚಿತ್ರ .ಮೊದಲ ಭಾರಿಗೆ ಇವರದೇ ನಿರ್ದೇಶನದ "ಮಿಂಚಿನ ಓಟ" ಕೂಡ ಪ್ರಶಸ್ತಿ ಗಿಟ್ಟಿಸಿಕೊಂಡಿತು.ಶಂಕರನಾಗ್ ಎಂಬತ್ತರ ದಶಕದಲ್ಲೇ ಕಂಡ ಕನಸುಗಳು ಬಹಳ.ಇಂದು ಬೆಂಗಳೂರಿನಲ್ಲಿ ಹೆಸರುವಾಸಿಯಾಗಿರುವ ಕಂಟ್ರಿ ಕ್ಲಬ್ ಇವರೇ ಪ್ರಾರಂಭಿಸಿದ್ದು.ಒಮ್ಮೆ ಲಂಡನ್ ಗೆ ಭೇಟಿ ನೀಡಿದ್ದ ಶಂಕರನಾಗ್ ರವರಿಗೆ ಬೆಂಗಳುರಿನಲ್ಲು ಮೆಟ್ರೋ ಪ್ರಾರಂಭಿಸಬೇಕು ಎಂಬ ಯೋಜನೆಯೊಂದು ಆ ದಿನಗಳಲ್ಲೇ ಇತ್ತು .ಆದರೆ ಅಪಘಾತದಿಂದ ೧೯೯೦ ರಲ್ಲಿ ನಿಧನರಾದರು.ಇಂದು ಬೆಂಗಳೂರಿನಲ್ಲಿ ಮೆಟ್ರೋ ಪ್ರಾರಂಭವಾಗಿದೆ . ಜನರೆಲ್ಲಾ ಸಂತೋಷದಿಂದ ಮೆಟ್ರೋ ಪ್ರಯಾಣ ಮಾಡುತ್ತಿದ್ದಾರೆ.ಸಾಕಷ್ಟು ಸಮಯ ಉಳಿತಾಯವಾಗುತ್ತಿದೆ.ಟ್ರಾಫಿಕ್ ಸಮಸ್ಯೆ ಕಡಿಮೆ ಆಗಬಹುದೆಂಬ ನಂಬಿಕೆಯಿದೆ.ಎಷ್ಟೋ ವರ್ಷಗಳ ಹಿಂದೆ ಶಂಕರನಾಗ್ ಕಂಡ ಕನಸು ನನಸಾಗಿದೆ.ಆದರೆ ಅವರೇ ನಮ್ಮೊಂದಿಗಿಲ್ಲದಿರುವುದು ವಿಷಾದನೀಯ.

Thursday, 27 October 2011

ಅಂಟಿಗೆ-ಪಿಂಟಿಗೆ


ಅಂಟಿಗೆ ಪಿಂಟಿಗೆ ಎಂಬುದು ಮಲೆನಾಡಿನ ಕೆಡೆಗಳಲ್ಲಿ ಪ್ರಸಿದ್ಧಿ .ಮಲೆನಾಡಿನಲ್ಲಿ ಒಂದು ಸಂಪ್ರದಾಯವಿದೆ . ದೀಪಾವಳಿಯ ಪಾಡ್ಯದ ದಿನದಂದು ರಾತ್ರಿ ಊರಿನ ಕೆಲವು ಮಂದಿ ಒಟ್ಟು ಗೂಡಿ ಮನೆಮನೆಗೂ ಹಾಡುಹೇಳುತ್ತಾ ಹೋಗುವುದು ಇದನ್ನೇ ಅಂಟಿಗೆ ಪಿಂಟಿಗೆ ಎಂದು ಕರೆಯುತ್ತಾರೆ. ರಾತ್ರಿ ಸುಮಾರು ಹತ್ತು ಗಂಟೆಯಿಂದ ಪ್ರಾರಂಭಿಸಿದರೆ ಬೆಳಗಿನ ಜಾವ ಐದು ಗಂಟೆಯವರೆಗೆ ಹಾಡುಹೇಳುತ್ತಾ ಶುಭ ಕೋರುತ್ತಾರೆ .
ಮಲೆನಾಡಿನ ಹಳ್ಳಿಗಳು ಸಾಲುಕೇರಿ. ಒಂದು ಊರಿನಲ್ಲಿ ಕನಿಷ್ಠ ಐವತ್ತು ಮನೆಗಳಿರುತ್ತದೆ.ಊರಿನ ಕೆಲವು ಜನರು ಸೇರಿ ಈ ಅಂಟಿಗೆ ಪಿಂಟಿಗೆ ಗೊಸ್ಕರವೇ ಒಂದು ತಿಂಗಳಿನಿಂದ ಹಾಡು ಹೇಳುವ ಅಭ್ಯಾಸ ಪ್ರಾರಂಭಿಸುತ್ತಾರೆ.ಇದಕ್ಕೆ ದೊಡ್ಡವರು ಚಿಕ್ಕವರು ಎಂಬ ಭೇದವಿಲ್ಲ .ಹಿರಿಯರಿಂದ ಈಗಿನ ಯುವಪೀಳಿಗೆಯವರು ಆಸಕ್ತಿ ಇರುವವರು ಸೇರಿಕೊಂಡು ಹಾಡುಕಲಿಯುತ್ತಾರೆ.
ಪಾಡ್ಯದ ದಿನ ರಾತ್ರಿ ಕೋಲಿಗೆ ಬೆಂಕಿ ಹಚ್ಚಿಕೊಂಡು ಹಣತೆ ಹಿಡಿದು ಪ್ರಾರಂಭಿಸುವ ಈ ಹಾಡಿನ ತಂಡ ಮೊದಲು ಊರಿನ ದೇವರಗುಡಿ ಗೆ ಪೂಜೆ ಸಲ್ಲಿಸಿ ಪ್ರಾರಂಭಿಸುತ್ತಾರೆ.ಪ್ರತಿಯೊಬ್ಬರ ಮನೆಯಲ್ಲೂ ಅಂಟಿಗೆ ಪಿಂಟಿಗೆ ಯವರು ತಂಡ ಹಣತೆಗೆ ಎಣ್ಣೆ ಹಾಕಲಾಗುತ್ತದೆ.ಆ ದೀಪ ಬೆಳಗಿನವರೆಗೆ ಆರದಂತೆ ನೋಡಿಕೊಳ್ಳಲಾಗುತ್ತದೆ.ಹಾಡುತ್ತಾ ಬಂದವರಿಗೆ ಅಕ್ಕಿ ,ಅಡಿಕೆ , ಕಾಣಿಕೆ, ಹೋಳಿಗೆ ಇವನ್ನೆಲ್ಲ ಕೊಡುವುದು ಇಲ್ಲಿಯ ಪದ್ಧತಿ.
ಹೀಗೆ ಒಂದು ಮನೆ ನಂತರ ಇನ್ನೊಂದು ಮನೆಗಳಿಗೆ ಹೋಗಿ ದೇವರ ನಾಮಗಳನ್ನು ಹಾಡುತ್ತ ಹೋಗುವುದು ಅಲ್ಲಿಯ ಜನರಿಗೆ ಸಂಭ್ರಮ .ಇದು ಮಲೆನಾಡಿನ ಹಳ್ಳಿಗಳಲ್ಲಿ ಹಿಂದಿನಿಂದಲೂ ನಡೆಸಿಕೊಂಡು ಬಂದ ಸಂಪ್ರದಾಯ . ಅದನ್ನು ಈಗಲೂ ಜನ ಮುಂದುವರೆಸಿಕೊಂಡು ಹೊಗುತ್ತಿದ್ದಾರೆ.ಮನೆಮನೆಗೆ ಹೋಗಿ ಕತ್ತಲೆ ದೊರವಾಗಿ ಬೆಳಕು ಮೂಡಲಿ ಎಂದು ಶುಭ ಹಾರೈಸುವುದು ಇದರ ಸಂಕೇತ .

ನನ್ನ ಈ ಲೇಖನ ಈಕನಸುವಿನಲ್ಲಿ ಪ್ರಕಟವಾಗಿದೆ http://www.ekanasu.com/2011/11/blog-post_02.html

ನಾನು ನನ್ನ ಕನಸು


ಸಿನೆಮಾ ನೋಡುವುದೆಂದರೆ ಮಕ್ಕಳಿಂದ ಹಿಡಿದು ವಯಸ್ಕರಿಗೂ ಕೂಡ ಒಂದು ರೀತಿಯ ಮೋಜು. ಹಾಗೆ ಟೈಮ್ ಪಾಸ್ ಗೆ ನಾನು ಇತ್ತೀಚಿಗೆ ನೋಡಿದ ಚಲನಚಿತ್ರವೆಂದರೆ "ನಾನು ಮತ್ತು ನನ್ನ ಕನಸು"
ನನಗೆ ತುಂಬಾ ಇಷ್ಟವಾದ ಫಿಲಂ ಇದು.ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ನೋಡಬಹುದಾದ ಫಿಲಂ ಇದು. ಪ್ರಕಾಶ್ ರೈ ಅವರ ಅಭಿನಯದ ಅವರದೇ ಅಭಿನಯದ ಚಿತ್ರವಿದು.ಎಂದಿನಂತೆ ಪ್ರಕಾಶ ರೈ ಅವರ ಅಭಿನಯ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವುದರಲ್ಲಿ ಯಶಸ್ವಿಯಾಗಿದೆ.
ಇದು ಅಪ್ಪ-ಮಗಳ ನಡುವಿನ ವಾಸ್ತವಕ್ಕೆ ಹತ್ತಿರವಾದ ಚಿತ್ರ.ಒಂದು ಮಗುವಿಗೆ ಅಪ್ಪ ಹೇಗೆ ಬೇಡಿಕೆಗಳನ್ನೆಲ್ಲ ಪೂರೈಸುತ್ತಾನೆ. ಮಗುವಿನ ಮುಗ್ಧ ಮನಸ್ಸು ಹೇಗೆ ಪಾಲಕರನ್ನು ತನ್ನತ್ತ ಸೆಳೆಯುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.ಪ್ರತಿಯೊಬ್ಬ ಪೋಷಕರು ನೋಡಲೇಬೇಕಾದ ಫಿಲಂ ಇದು.
ಒಂದು ಹೆಣ್ಣು ಮಗು ತನ್ನ ಅಪ್ಪನನ್ನು ಚಿಕ್ಕವಳಿದ್ದಾಗ ಹೇಗೆ ಅವಲಂಬಿಸಿರುತ್ತದೆ ಅದೇ ದೊಡ್ದವರಾಗುತ್ತಿದ್ದಂತೆ ತನ್ನ ಇಷ್ಟ, ಬೇಡಿಕೆಗಳನ್ನು ತಂದೆಯನ್ನು ಕೇಳದೆ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಮತ್ತು ಆ ನಿರ್ಧಾರಕ್ಕೆ ಒಪ್ಪಲೇಬೇಕಾದ ಅನಿವಾರ್ಯತೆ ತಂದೆ ತಾಯಿಗೆ ಬರುತ್ತದೆ ಎಂಬುದು ವಾಸ್ತವಕ್ಕೆ ಹತ್ತಿರವಾಗಿದೆ.
ಹಂಸಲೇಖ ಅವರ ಸಂಗೀತ ಫಿಲಂ ಗೆ ಸಾಥ್ ನೀಡುವಲ್ಲಿ ಯಶಸ್ವಿ ಆಗಿದೆ.ಒಟ್ಟಾರೆಯಾಗಿ ಮೊದಲಿನಿಂದ ಕೊನೆಯವರೆಗೆ ಪ್ರೇಕ್ಷಕನ ಮನ ಸೆರೆಹಿಡಿಯುವಲ್ಲಿ ಈ ಚಲನಚಿತ್ರ ಯಶಸ್ವಿ ಆಗಿದೆ.

Tuesday, 25 October 2011

ಸಂಜೆ

ನಮ್ಮ ಮನೆಯ ಕಿಟಕಿಯಿಂದ ಒಂದು ಸಂಜೆ ನಾ ತೆಗೆದ ಚಿತ್ರ ಅದನ್ನು ನೋಡುತ್ತಾ ನನ್ನ ಮನದಲ್ಲಿ ಮೂಡಿದ ಕವಿತೆ ಇದು


ಬೆಳಕ ಸರಿಸಿ
ಮುಸುಕು ಕವಿದು
ಆವರಿಸುತಿದೆ ಕತ್ತಲು
ಬಾಳ ಸವೆಸಿ
ಮುಗಿದ ಬದುಕು
ಸಾಗುತಿದೆ ಎತ್ತಲೋ ?
ಮುಗಿದ ದಿನದ
ಸೂಚನೆಯೋ ಕೂಗುತಿಹುದು
ಹಕ್ಕಿಗಳು
ಬಾನ ದಾಟಿ ಗೂಡು
ಸೇರಹೊರಟಿಹುದು
ಬಯಕೆಗಳು

Friday, 21 October 2011

ಶುಭಾಶಯ


ದೀಪಾವಳಿ ದೀಪಗಳ ಹಬ್ಬ . ನಮ್ಮ ಮಲೆನಾಡಿನಲ್ಲಿ ಅಳಿಯನ ಹಬ್ಬ ಎಂದೇ ಕರೆಯುತ್ತಾರೆ . ನಮ್ಮಲ್ಲಿ ಒಂದು ಸಂಪ್ರದಾಯವಿದೆ.ಹೊಸದಾಗಿ ಮದುವೆಯಾದ ಮಗಳು ಅಳಿಯ ಅಂದು ತವರುಮನೆಗೆ ಹೋಗಿ ಹಬ್ಬ ಆಚರಿಸಬೇಕು.ಅದು ಮದುಮಕ್ಕಳಿಗೆ ಹೊಸಹಬ್ಬ .ಮಗಳು ಅಳಿಯ ಬರುತ್ತಾರೆ ಎಂದು ತಂದೆತಾಯಿಗೆ ಎಲ್ಲಿಲ್ಲದ ಹರ್ಷ.ಮನೆಯಬಾಗಿಲು ಗಳಿಗೆ ಹಸಿರು ತೋರಣ ಕಟ್ಟಿ ಸಂತೋಷದಿಂದ ಪ್ರಾರಂಭಿಸುತ್ತಾರೆ.ಮನೆಯ ಮುಂದೆ ರಂಗೋಲಿ ಇಟ್ಟು ಶುಭಾಶಯ ಕೋರುತ್ತಾರೆ ಆ ದಿನ ಬೆಳಿಗ್ಗೆ ಮಗಳು ಅಳಿಯನಿಗೆ ಎಣ್ಣೆ ಅರಿಶಿನ ಹಾಕಿ ಅಭ್ಯಂಜನ ಮಾಡಿಸುತ್ತಾರೆ.ಹಬ್ಬಕ್ಕೆ ಉಡುಗೊರೆಯಾಗಿ ಹೊಸ ವಸ್ತ್ರವನ್ನು ನೀಡಿ ಸಂಭ್ರಮಿಸುತ್ತಾರೆ.

ದೇವರ ಕೋಣೆಯಲ್ಲಿ ದೀಪಗಳನ್ನು ಹಚ್ಚುವುದರಿಂದ ಪ್ರಾರಂಭಿಸಿ ಮನೆಯ ಹೊರಗಿನ ಮೆಟ್ಟಿಲು ಗಳವರೆಗೆ ದೀಪಗಳ ಸಾಲು ಅಲಂಕಾರಮಾಡಲಾಗುತ್ತದೆ.ಅಳಿಯ ಬಂದಿರುವ ಸಂತಸದಲ್ಲಿ ಹೋಳಿಗೆ ,ಕಡುಬು,ಕೋಸಂಬರಿ,ಚಿತ್ರಾನ್ನ,ಪಾಯಸ,ಚಕ್ಕುಲಿ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.ಗೋವುಗಳಿಗೆ ನವ ಮದುಮಕ್ಕಳಿಂದ ಆರತಿ ಎತ್ತಿಸುತ್ತಾರೆ.ಸಂಜೆಯಾಯಿತೆಂದರೆ ಸಾಕು ಬಾಸಿಂಗ ಕಟ್ಟಿಕೊಂಡ ಜೋಡಿ ಎತ್ತುಗಳನ್ನು ಓಡಿಸಿಕೊಂಡು ಎಲ್ಲರ ಮನೆಗೆ ಹೋಗುವುದು ಅಲ್ಲಿ ಅವುಗಳಿಗೆ ನೀಡಲಾದ ತಿಂಡಿ ತೆಗೆದುಕೊಳ್ಳುವುದು , ಅದಾದ ನಂತರ ದೀಪ ಹಚ್ಚಿಕೊಂಡು ಎಲ್ಲರ ಊರಿನವರೆಲ್ಲ ಒಟ್ಟು ಸೇರಿ ಊರಲ್ಲಿರುವ ಬೂತಪ್ಪ ಚೌಡಪ್ಪ ಗಳಿಗೆ ದೀಪ ಇಟ್ಟು ಬರುವುದು ಇದೆಲ್ಲ ಸುಂದರವಾಗಿರುತ್ತದೆ.ಇನ್ನು ಚಿಕ್ಕಮಕ್ಕಳಿದ್ದರಂತು ಹೊಸಬಟ್ಟೆ ಧರಿಸಿ ಎಲ್ಲರಿಗೂ ತೋರಿಸುವುದೆಂದರೆ ಎಲ್ಲಿಲ್ಲದ ಹಿಗ್ಗು . ಜೊತೆಗೆ ಪಟಾಕಿಗಳ ಭರಾಟೆ.

ರಾತ್ರಿ ಪಟಾಕಿಗಳ ಸುರಿಮಳೆ ಆ ಸಮಯಕ್ಕೆ ಸರಿಯಾಗಿ ಎಲ್ಲರ ಮನೆಯವರೂ ಹೊರಬಂದು ನೋಡುವ ಸಂಭ್ರಮವೇ ಚಂದ .ಆ ದಿನ ನೆಂಟರಿಷ್ಟರಿಂದ ಚಿಕ್ಕ ಮಕ್ಕಳ ಗದ್ದಲ ಗಳಿಂದ ತುಂಬಿರುವ ಎಲ್ಲರ ಮನೆಗಳಲ್ಲಿ ಸಂಭ್ರಮವೋ ಸಂಭ್ರಮ.ಹೀಗೆ ದೀಪಾವಳಿ ಹಬ್ಬವೆಂದರೆ ಹೊಸಹರುಷ , ಸಂತಸ, ಸಂಭ್ರಮದಿಂದ ಕೂಡಿರುತ್ತದೆ.
ಇನ್ನೇನು ದೀಪಾವಳಿ ಹತ್ತಿರ ಬರುತ್ತಿದೆ.ದೂರದಲ್ಲಿರುವುದರಿಂದ ಮೊದಲ ಹೊಸಹಬ್ಬಕ್ಕೆ ತವರೂರಿಗೆ ಹೋಗಲಾಗುತ್ತಿಲ್ಲ.ನನ್ನ ತವರೂರಿಗೆ ಬಂಧುಗಳಿಗೆ,ಸ್ನೇಹಿತರಿಗೆ ಶುಭಾಶಯಗಳು .ದೀಪಾವಳಿ ಎಲ್ಲರ ಬಾಳಲ್ಲಿ ಬೆಳಕನ್ನು ತರಲಿ.
ನನ್ನ ಈ ಲೇಖನ ಈ ಕನಸು ವಿನಲ್ಲಿ ಪ್ರಕಟವಾಗಿದೆ http://www.ekanasu.com/2011/10/blog-post_25.html

ಹಾಗೆ ಸುಮ್ಮನೆ

ಪ್ರೀತಿಯ ಹುಡುಗ

ನನ್ನ ಯಾಕೆ ಹೀಗೆ ಕಾಡ್ತಾ ಇದ್ದೀಯ ? ಬೆಳಿಗ್ಗೆ ಎದ್ದು ದೇವರಿಗೆ ಕೈ ಮುಗಿಯಲು ನಿಂತರೆ ನೀನೆ ಕಣ್ಣೆದುರು ಬರ್ತೀಯ .ಚಳಿಯಲ್ಲಿ ನಡುಗುತ್ತ ಕಾಫಿ ಕುಡಿಯುತ್ತಿದ್ರೆ ನೀ ಎದುರು ಕುಳಿತು ನಗ್ತಿರ್ತೀಯ.ಮುಂಜಾನೆಯ ಇಬ್ಬನಿಯ ಸವಿ ಅನುಭವಿಸುತ್ತಿದ್ದರೆ ನೀ ಎಲ್ಲೊ ದೂರದಲ್ಲಿ ಅಡಗಿ ನಿಂತು ನನ್ನನ್ನೇ ನೋಡುತ್ತಿದಿಯ ಅನ್ನಿಸಿಬಿಡುತ್ತದೆ.ಮಧ್ಯಾನ್ಹ ಬಿಸಿ ಅಡುಗೆ ಮಾಡಿ ತಿನ್ನುತ್ತ ಕುತಾಗ ನೀನು ಬಂದು ನಂಗೆ ಇಲ್ವಾ ಕೇಳಿದ ಹಾಗೆ ಆಗುತ್ತೆ ನಿನಗಾಗಿ ಸ್ವಲ್ಪ ಹಾಗೆ ಉಳಿಸಿ ಕಾಯುತ್ತಾ ಕುಳಿತುಕೊಂಡು ಬಿಡೋಣ ಅನ್ನಿಸುತ್ತೆ.

ಕನ್ನಡಿಯ ಎದುರು ನಿಂತು ನನ್ನನ್ನೇ ನಾ ನೋಡುತ್ತಿದ್ದರೆ ನೀ ಬಂದು ಹಿಂದಿನಿಂದ ತಬ್ಬಿದ ಹಾಗಾಗುತ್ತೆ.ಕಣ್ಣುಮುಚ್ಚಿ ಸ್ವಲ್ಪ ಹೊತ್ತು ಮಲಗಿದರೆ ನೀ ಬಂದು ಕಚಕುಳಿ ಇಟ್ಟಂತಾಗುತ್ತದೆ.ಮೊಬೈಲ್ ನಲ್ಲಿ ನಿನ್ನ sms ಗಾಗಿ ಆಗಾಗ ತಡಕಾಡುತ್ತಿರುತ್ತೇನೆ. ನಿನ್ನ ಫೋನ್ ಗಾಗಿ ಕಾಯುತ್ತಾ ಕುಳಿತಲ್ಲೇ ಕುಳಿತಿರುತ್ತೇನೆ.ನೀ ಇಲ್ಲದೆ ಒಬ್ಬಳೇ ಹೊರಗೆ ಹೊರಟರೆ ಒಂಟಿ ಅನ್ನಿಸಿಬಿಡುತ್ತದೆ.ಒಬ್ಬಳೇ ಹಾಡು ಹಾಡುತ್ತಿದ್ದರೆ ನಿನ್ನ ಸಾತ್ ಬೇಕು ಅನ್ನಿಸಿಬಿಡುತ್ತದೆ.ಕಿಟಕಿಯಿಂದ ಹೊರನೋಡುತ್ತಿದ್ದರೆ ಈ ಸೂರ್ಯ ಈಗಲೇ ಮುಳುಗಿ ಬಿಡಬಾರದಾ ಬೇಗ ಸಂಜೆ ಆಗಬಾರದಾ?? ಎಂದೆನಿಸುತ್ತದೆ.ಪ್ರತಿ ಕ್ಷಣ ನಿನ್ನನ್ನೇ ಕಾಯುತ್ತಿರುತ್ತೇನೆ . ಬೆಳಿಗ್ಗೆ ಇಂದ ಸಂಜೆವರೆಗೆ ನಿನ್ನ ತುಂಬಾ ಮಿಸ್ ಮಾಡಿಕೊಳ್ತೀನಿ ಕಣೋ. ಬೇಗ ಬಂದುಬಿಡು .

ಮುಂಜಾನೆಯ ಚಿತ್ರ

ಇಂದು ಮುಂಜಾನೆ ಮನೆಯಿಂದ ಹೊರಗೆ ಇಣುಕಿ ನೋಡಿದಾಗ ಮೊದಲು ಕಂಡ ದೃಶ್ಯವಿದು

ಒಂದು ಇಳಿಸಂಜೆ ಯಲ್ಲಿ ಲಂಡನ್ ನ ಪಾರ್ಕ್ ಒಂದರಲ್ಲಿ ನನ್ನವರು ಸೆರೆಹಿಡಿದ ಚಿತ್ರವಿದು