Saturday, 27 February 2016

ಕುಂದಾದ್ರಿ

Published in 26th feb 2016 vijayanext

ಅದೊಂದು ವೀಕೆಂಡ್ . ಊರಿಗೆ ಹೋದ ನಾವು ಎಲ್ಲಾದರೂ ಹತ್ತಿರದಲ್ಲಿ ಸುತ್ತಲು ಹೋಗಬೇಕು ಎಂದು ನಿರ್ಧರಿಸಿದ್ದೆವು. ನಗರಗಳ ಓಡಾಟ ಬೇಸರ ತರಿಸಿದ್ದರಿಂದ ಯಾವುದಾದರೂ ಒಂದು ಒಳ್ಳೆಯ ತಾಣಕ್ಕೆ ಹೋಗಬೇಕು ಎಂಬುದು ನಮ್ಮ ಮನೆಯವರೆಲ್ಲರ ಅಪೇಕ್ಷೆಯಾಗಿತ್ತು. ಹಾಗೆಂದೇ ನಿರ್ಧರಿಸಿ ಪರಿಚಯದವರನ್ನು ವಿಚಾರಿಸಿದಾಗ ಸಿಕ್ಕಿದ್ದು ಈ ಬೆಟ್ಟ. ಸುಮಾರು ನಾಲ್ಕರಿಂದ ಐದು ಕಿ ಮೀ  ನಷ್ಟು ದೂರ ಎತ್ತರದ ಬೆಟ್ಟದೆಡೆಗೆ ನಾವು ಹೊರಟ ಕಾರು ನಮ್ಮನ್ನು ಎಳೆಯಲಾರದೆ ಎಳೆದುಕೊಂಡು ಹೋಗುತ್ತಿದ್ದರೆ ಸುತ್ತಲೂ ದಟ್ಟ  ಕಾಡು. ಅದು ಸಂಜೆಯ ಸಮಯವಾಗಿದ್ದರಿಂದಲೋ ಏನೋ ತಣ್ಣನೆಯ ಗಾಳಿ , ಒಂದು ಕಾರು ಹೋಗುತ್ತಿದ್ದರೆ ಇನ್ನೊಂದು ಎದುರಿನಿಂದ ಬರಲಾರದಂತ ಇಕ್ಕಟ್ಟು ರಸ್ತೆಯಾದದ್ದರಿಂದಲೋ ಏನೋ ರಸ್ತೆ ಬಿಕೋ ಎನ್ನುತ್ತಿತ್ತು. ಕಾರು ಮೇಲೇರುತ್ತಿದ್ದಂತೆ ಕಿಟಕಿಯಿಂದ ಸುಮ್ಮನೆ ಗಾಳಿಗೆ ಹೊರಗೆ ಮುಖ ಒಡ್ಡಿದರೆ ಅದ್ಬುತ ಲೋಕ. ಸುಂದರವಾದ ಹಸಿರು ತುಂಬಿದ ಅರಣ್ಯಗಳ ಬೀಡು. ಅದೊಂದು ಅದ್ಬುತ ಲೋಕವೇ ಸರಿ. ಕಾರಿನಲ್ಲಿ ಹಳೇ ಹಿಂದಿ ಚಿತ್ರಗೀತೆಗಳ ಸರಮಾಲೆ ಇಳಿಸಂಜೆಯ ಸೂರ್ಯ ಮುಳುಗುವ ಹೊತ್ತಿನ ಆ ಸುಂದರ ಕ್ಷಣ ಅಕ್ಷರಗಳಲ್ಲಿ ವರ್ಣಿಸುವುದು ಕಷ್ಟ ಅದನ್ನು ನೋಡಿಯೇ ಅನುಭವಿಸಬೇಕು. 

ಕಾರು ಇಳಿದು ಮೆಟ್ಟಿಲುಗಳನ್ನು ಏರಿದರೆ ಬೆಟ್ಟದ ತುದಿ ತಲುಪಿದರೆ ಅಲ್ಲಿ ಕಾಣುವುದು ಪ್ರಕೃತಿಯ ಸುಂದರ ತಪ್ಪಲು. ಸುತ್ತಲೂ ಕಲ್ಲು ಬಂಡೆಗಳನ್ನು ಹೊಂದಿ ಮಧ್ಯದಲ್ಲಿ ದೇವಸ್ಥಾನವನ್ನು ಹೊಂದಿರುವ ಈ ಸ್ಥಳದಲ್ಲಿ ನಿಂತು ಒಮ್ಮೆ ಕೆಳ ನೋಡಿದರೆ ಅಲ್ಲಿ ಕಾಣುವುದು ಹಸಿರು , ಬರೀ ಹಸಿರು. ಬೀಸುವ ತಂಗಾಳಿಗೆ ಮೈಯೊಡ್ಡಿ ಈ ಹಸಿರನ್ನು ಕಣ್ಣು ತುಂಬಿಸಿಕೊಳ್ಳುವುದು ಯಾರಿಗೆ ತಾನೇ ಇಷ್ಟವಾಗುವುದಿಲ್ಲ ?

ಹೌದು ನಾನು ಈಗ ಹೇಳ ಹೊರಟಿರುವ  ,ಇಷ್ಟೊಂದು ಸುಂದರವಾದ ಪ್ರಕೃತಿಯ ಸೊಬಗನ್ನು ನೋಡಲು ನೀವೂ ಕೂಡ  ನೋಡ ಬಯಸುತ್ತೀರಾದರೆ  ಕುಂದಾದ್ರಿ ಸರಿಯಾದ ಸ್ಥಳ. ತೀರ್ಥಹಳ್ಳಿಯಿಂದ ಸುಮಾರು ೨೩ ಕಿ ಮೀ ಅಂತರದಲ್ಲಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಬರುವ ಈ ಕುಂದಾದ್ರಿ ಜೈನರ ಪವಿತ್ರ ಸ್ಥಳವೂ ಹೌದು. ಹದಿನೇಳನೆ ಶತಮಾನದ ಜೈನ ಮುನಿಗಳ ಕಾಲದಿಂದಲೂ ಇರುವ ಈ ಕುಂದಾದ್ರಿಯು ಸುಮಾರು ೮೦೦ ಮೀಟರ್ ಎತ್ತರದಲ್ಲಿರುವ ಬೆಟ್ಟದ ಮೇಲಿದೆ. ಜೈನ ಮೂರ್ತಿಗಳನ್ನು ಒಳಗೊಂಡಿರುವ ಈ ಜೈನ ಬಸದಿಯಲ್ಲಿ ನಿತ್ಯವೂ ಪೂಜೆಯೂ ನಡೆಯುತ್ತದೆ ಮತ್ತು ಸಾವಿರಾರು ಜೈನ ಭಕ್ತರು ಕೂಡ ಇಲ್ಲಿ ಪ್ರತಿ ವರ್ಷ ಭೇಟಿ ನೀಡುತ್ತಾರೆ.  ತೀರ್ಥಹಳ್ಳಿ ಮತ್ತು ಉಡುಪಿ ಮಾರ್ಗವಾಗಿ ಸಂಚರಿಸುವಾಗ ಸಿರುವ ಈ ಕುಂದಾದ್ರಿ ಪ್ರವಾಸಿಗರು ಭೇಟಿ ನೀಡಬಹುದಾದ ಸುಂದರ ಸ್ಥಳ . ಹಸುರಿನಿಂದ ಕೂಡಿರುವ ಈ ಸ್ಥಳ ಗಾಳಿ ಬೆಳಕಿನ ಜೊತೆಗೆ ಮನಸ್ಸನ್ನು ತಂಪು ಮಾಡುತ್ತದೆ. ಈ ಬೆಟ್ಟವು ಬಹಳ ಎತ್ತರದಲ್ಲಿ ಇರುವುದರಿಂದ ಇಲ್ಲಿ ನಿಂತು ಸುತ್ತಲಿನ ಹಸಿರ ಸಿರಿಯನ್ನು ಕಣ್ಣು ತುಂಬಿಕೊಳ್ಳಬಹುದು.ಮೇಲಿನವರೆಗೂ ಟೆಂಪೋ ಅಥವಾ ಜೀಪು ಹೋಗುವ ರಸ್ತೆಯನ್ನು ಇತ್ತೀಚಿಗೆ ಮಾಡಿರುವುದರಿಂದ ಸಾಕಷ್ಟು ಪ್ರವಾಸಿಗರ ಗಮನವನ್ನು ಸಹ ಇದು ಸೆಳೆಯುತ್ತಿದೆ. ರಸ್ತೆ ಕೂಡ ಯಾವುದೇ ತೊಡಕುಗಳಿಲ್ಲದೆ , ಗುದ್ದು ಗುಂಡಿಗಳಿಲ್ಲದೆ ಸುಲಭವಾಗಿ ಸಾಗಬಹುದಾದ ರಸ್ತೆಯಾಗಿದೆ .ಈ ಬೆಟ್ಟ  ಇತ್ತೀಚಿಗೆ ಹೆಚ್ಚು ಜನಪ್ರಿಯಗೊಳ್ಳುತ್ತಿದ್ದು ಕರ್ನಾಟಕದಿಂದಷ್ಟೇ ಅಲ್ಲ ,ಗುಜರಾತ್ , ಮಹಾರಾಷ್ಟ್ರ ಹೀಗೆ ಉತ್ತರ ಭಾರತದ ಇನ್ನಿತರ ಸ್ಥಳಗಳಿಂದ ಜೈನ ಭಕ್ತರು ಇಲ್ಲಿ ಬಂದು ಒಂದು ದಿನ ನೆಲೆಸಿ ಪೂಜೆಯ ಜೊತೆಗೆ ಇಲ್ಲಿನ ಅದ್ಬುತ ಪ್ರಕೃತಿಯ ಮಡಿಲಲ್ಲಿ ಮಿಂದು ಹೋಗುತ್ತಾರೆ ಎಂಬುದು ಇಲ್ಲಿನ ಅರ್ಚಕರ ಅಂಬೋಣ. ಅಷ್ಟೇ ಅಲ್ಲ ಸಾವಿರಾರು ವರ್ಷಗಳ ಹಿಂದೆ ಕಲ್ಲಿನಿಂದ ಕಟ್ಟಲಾದ ಜೈನ ಬಸದಿಯು ಇಂದಿಗೂ ಕೂಡ ವಾಸ್ತು ಶಿಲ್ಪಗಳನ್ನು ಉಳಿಸಿ ಕೊಂಡು ಬಂದಿರುವುದು ಇದರ ವಿಶೇಷತೆಯೇ ಸರಿ. ಇತ್ತೀಚಿಗೆ  ಜೀರ್ಣೋದ್ಧಾರ ಮಾಡಿ ಕೆಲವೊಂದು ಬದಲಾವಣೆಯನ್ನು ಕೂಡ ಮಾಡಲಾಗಿದೆ ಎನ್ನುತಾರೆ ಇಲ್ಲಿನ ಅರ್ಚಕರು. 

ಈ ಕುಂದಾದ್ರಿಯ ಜೈನ ದೇಗುಲದ  ಪಕ್ಕದಲ್ಲಿರುವ ಕೊಳವು ಅಂತರ ಗಂಗೆಯಾಗಿದ್ದು ಸುಮಾರು 118 ಅಡಿ ಆಳವಿದೆ . ಎಂದೂ ಬತ್ತದೇ ಸದಾ ನೀರನ್ನು ಹೊಂದಿರುವ ಈ ಕೊಳವನ್ನು ಒಮ್ಮೆ ಸ್ವಚ್ಛಗೊಳಿಸಲು ಒಂದು ವಾರ ಬೇಕಾಗುವುದು ಎಂದು ಅಲ್ಲಿನ ಅರ್ಚಕರು ತಿಳಿಸುತ್ತಾರೆ.ಆಗಾಗ ಇದನ್ನು ಸ್ವಚ್ಚಗೊಳಿಸುವುದು ಕೂಡ ನಡೆದು ಕೊಂಡು ಬರುತ್ತಿದೆ ಎನ್ನಲಾಗುತ್ತದೆ. ಸ್ವಚ್ಚವಾದ ನೀರನ್ನು ಹೊಂದಿರುವ ಈ ರೀತಿಯ ಸಾಕಷ್ಟು ಅಂತರಗಂಗೆಗಳನ್ನು ಇಲ್ಲಿ ಕಾಣಬಹುದು. ಈ ಸ್ಥಳ ಕಲ್ಲಿನ ಬಂಡೆಗಳಿಂದ ಸುತ್ತುವರೆದಿದ್ದು ಕೆಳಗೆ ಇಳಿದು ಕೂಡ ಸಾಕಷ್ಟು ಪ್ರಕೃತಿ ವೀಕ್ಷಣೆ ಮಾಡಬಹುದು. ಕಲ್ಲು ಬಂಡೆಗಳ  ಮಧ್ಯದಲ್ಲಿ ಅಲ್ಲಲ್ಲಿ ಅಂತರಗಂಗೆ ಎದ್ದಿರುವುದು ಕೂಡ ವಿಶೇಷವೆನ್ನಬಹುದು.  ಅತಿ ಎತ್ತರದ ಬೆಟ್ಟವಿರುವುದರಿಂದ  ಸೂರ್ಯಾಸ್ತಮಾನವೂ  ಇಲ್ಲಿ ಸುಂದರವಾಗಿ ಕಾಣಿಸುತ್ತದೆ . ಆಗುಂಬೆಗಿಂತ ಎತ್ತರದಲ್ಲಿ ಈ ಕುಂದಾದ್ರಿ ಬೆಟ್ಟ ಇರುವುದರಿಂದ ಮೋಡ ಕವಿದು ಮುಸುಕು ಇರದಿದ್ದಲ್ಲಿ ಇಲ್ಲಿಂದ ಸೂರ್ಯಾಸ್ತ ಸುಂದರವಾಗಿ ಕಾಣಿಸುತ್ತದೆ ಎನ್ನಲಾಗುತ್ತದೆ. 

ಪ್ರಕೃತಿಯ ಹಚ್ಚ ಹಸುರನ್ನು ಹೊಂದಿರುವ ಈ ಸುಂದರ ಸ್ಥಳದಲ್ಲಿ ಚಲನಚಿತ್ರದ ಶೂಟಿಂಗ್ ಕೂಡ ನಡೆದಿದೆ. ಕುಂದಾದ್ರಿ ತಲುಪಲು ಸುಮಾರು ನಾಲ್ಕು ಕಿ ಮೀ ನಷ್ಟು ಎತ್ತರಕ್ಕೆ ಏರಬೇಕಾಗಿದ್ದು ಈಗ ಇಲ್ಲಿ ರಸ್ತೆ ಮಾಡಿರುವುದರಿಂದ ಜೀಪ್ , ಕಾರು ಗಳು ತುದಿಯವರೆಗೆ ಹೋಗುತ್ತವೆ. ಮೇಲೆ ಜೈನ ಬಸದಿಯನ್ನು ನೋಡಿಕೊಂಡು ಸುತ್ತಲೂ ಇರುವ ಕೊಳ ಮತ್ತು ಪ್ರಕೃತಿಯ ಸೊಬಗನ್ನು ಸವಿದು ಅಲ್ಲೇ ಕುಳಿತು ಮನಸ್ಸನ್ನು ಮುದಗೊಳಿಸಿಕೊಂಡು ಒಂದು ದಿನವನ್ನು ಸುಂದರವಾಗಿ ಕಳೆಯಲು  ಇದು ಸರಿಯಾದ ಸ್ಥಳ. ಜೊತೆಗೆ ನಮಗೆ ಬೇಕಾದ ಚುರುಮುರಿ ಇನ್ನಷ್ಟು ಕುರುಕಲು ತಿಂಡಿಗಳಿದ್ದರೆ ಅದನ್ನು ತಿನ್ನುತ್ತಾ ಕುಳಿತುಬಿಟ್ಟರೆ ಎದ್ದು ಬರಲು ಕೂಡ ಮನಸ್ಸಾಗದು.ಅದಲ್ಲದೆ  ಇತ್ತೀಚಿಗೆ ಸಾಕಷ್ಟು ಧಾರವಾಹಿಗಳಲ್ಲೂ ಕೂಡ ಈ ಸ್ಥಳವನ್ನು ಚಿತ್ರೀಕರಣಕ್ಕೆ ಬಳಸಿರುವುದನ್ನು ಕಾಣಬಹುದು. 

ಇಲ್ಲಿಂದ ೨೩ ಕಿ ಮೀ ಅಂತರದಲ್ಲಿ ತೀರ್ಥಹಳ್ಳಿ ಇದ್ದು ಇಲ್ಲಿ ರಾಮೇಶ್ವರ ದೇವಸ್ಥಾನ ಮತ್ತು ಅಲ್ಲಿಯ ಪಕ್ಕದ ತುಂಗಾ ನದಿಯ ತಟ ಕೂಡ ಸಂಜೆಯ ಸಮಯದಲ್ಲಿ ಸುಂದರವಾಗಿರುತ್ತದೆ.  ಪ್ರಕೃತಿಯ ಸೊಬಗನ್ನು ಸವಿಯಬಯಸುವವರು ಕುಂದಾದ್ರಿ ಯನ್ನು ವರ್ಷದ ಯಾವುದೇ ಸಮಯದಲ್ಲಿ ಕೂಡ ಭೇಟಿ ನೀಡಬಹುದಾದರೂ ಇದು ಆಗುಂಬೆಗೆ ಸಮೀಪವಿರುವುದರಿಂದ ಅಲ್ಲಿನ ಸೂರ್ಯಾಸ್ತ ನೋಡಲು ಸರಿಯಾದ ಸಮಯ ಡಿಸೆಂಬರ್ ತಿಂಗಳು.

Sunday, 7 February 2016

ಗುಡವಿ ಪಕ್ಷಿಧಾಮ



My this article got published in vijayanext 06/02/16

ಪ್ರಕೃತಿಯ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಪಕ್ಷಿಗಳ ಪಾಲು ಕೂಡ ಮಹತ್ವದ್ದು. ವಿವಿದ ರೀತಿಯ ಪಕ್ಷಿಗಳು ಒಂದೆಡೆ ಸೇರಿದರೆ ಅದನ್ನು ನೋಡಿ ಕಣ್ಣು ತಂಪು ಮಾಡಿಕೊಳ್ಳುವುದೆಂದರೆ ಸುಂದರ.ಕರ್ನಾಟಕದಲ್ಲಿ ರಂಗನತಿಟ್ಟು, ಮಂಡಗದ್ದೆ  ಇಂತಹ ಹೆಸರಾಂತ ಪಕ್ಷಿಧಾಮಗಳ ಪಟ್ಟಿಯಲ್ಲಿ ಗುಡವಿ ಕೂಡ ಸೇರುತ್ತದೆ.ಗುಡವಿ ಪಕ್ಷಿಧಾಮ ಕರ್ನಾಟಕದ ಪ್ರಸಿದ್ಧ ಪಕ್ಷಿಧಾಮಗಳಲ್ಲಿ ಒಂದು. ಇದು ಸೊರಬ ತಾಲೂಕಿನಲ್ಲಿದೆ . ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಿಂದ 15 ಕಿ ಮೀ ಅಂತರದಲ್ಲಿ ಸೊರಬ ಬನವಾಸಿ ಮಾರ್ಗವಾಗಿ ಇರುವ ಈ ಗುಡವಿ ಒಂದು ಪುಟ್ಟ ಹಳ್ಳಿ. ಈ ಹಳ್ಳಿಯ ಒಂದು ಭಾಗದಲ್ಲಿ ಸುಮಾರು  74 ಚದರ ಕಿ ಮೀ ನಷ್ಟು ಜಾಗದಲ್ಲಿ ಈ ಪಕ್ಷಿಧಾಮವನ್ನು ನಿರ್ಮಿಸಿದ್ದಾರೆ. ವಿವಿಧ ರೀತಿಯ ಪಕ್ಷಿಗಳು ವರ್ಷದ ಕೆಲವು ಸಮಯದಲ್ಲಿ ಬಂದು ಇಲ್ಲಿ ಒಟ್ಟುಗೂಡುವುದರಿಂದ ಇದೊಂದು ಸುಂದರ ಪಕ್ಷಿಧಾಮವಾಗಿ ನಿರ್ಮಿತವಾಗಿದೆ. ಇದನ್ನು ಪ್ರವಾಸೋದ್ಯಮ ಇಲಾಖೆಯವರು ಕಾಳಜಿಯಿಂದ ಸ್ವಚ್ಚವಾಗಿ ಕಾಪಾಡಿಕೊಂಡು ಬಂದಿರುವುದು ಕೂಡ ಮೆಚ್ಚಬೇಕಾದ ಸಂಗತಿ.  

ಗುಡವಿ ಪಕ್ಷಿಧಾಮದ ಒಳಗೆ ಹೊಕ್ಕುತ್ತಿದ್ದಂತೆ ನಮಗೆ ಕಂಡು ಬರುವುದು ಮಕ್ಕಳು ಆಡಲಿಕ್ಕೆ ನಿರ್ಮಿಸಿರುವ ಪಾರ್ಕ್ , ಅಲ್ಲಿ ಬಂದ  ಮಕ್ಕಳು ಜೋಕಾಲಿ ಜಾರುಬಂಡಿ ಹೀಗೆ ಇನ್ನಿತರ ಆಟಗಳನ್ನು ಆಡಿ ಸಮಯ ಕಳೆಯುತ್ತಿದ್ದರೆ ದೊಡ್ಡವರು ಪಕ್ಷಿ ವೀಕ್ಷಣೆಗೆ ತಮ್ಮ ಪ್ರಯಾಣ ಬೆಳೆಸುತ್ತಿದ್ದುದು ಕಾಣಿಸುತ್ತಿತ್ತು.  ಹಕ್ಕಿಗಳು ಅಲ್ಲಲ್ಲಿ ಗುಂಪು ಕಟ್ಟಿಕೊಂಡು ಮರಗಳ ಸಂದಿಗಳಲ್ಲಿ ಅಡಗಿ ಕುಳಿತಿದ್ದರೆ ಅದನ್ನು ನೋಡಲು ಎತ್ತರದ ವೀಕ್ಷಣಾ ಸ್ಥಳವನ್ನು ಕೂಡ ಇಲ್ಲಿ ಮಾಡಲಾಗಿದೆ. ನಡೆದುಕೊಂಡು ಹೋಗುವ ದಾರಿಯಲ್ಲಿ ಸುತ್ತಲೂ ಹಸಿರಾದ ಗದ್ದೆ ಇರುವುದರಿಂದ ತಂಪು ಗಾಳಿ ಮತ್ತು ಸುಂದರ ಪ್ರಕೃತಿಯ ನೋಟ ನಮ್ಮನ್ನು ಸೆಳೆಯುತ್ತಿತ್ತು.ಪ್ರವಾಸೋಧ್ಯಮ ಇಲಾಖೆ ಮಾಡಿರುವ ಎತ್ತರದ ನಿಂತು ನೋಡಬಹುದಾದ ಕಟ್ಟಡವನ್ನು ಮೆಟ್ಟಿಲ ಮೂಲಕ ಹತ್ತಿ ಮೇಲೆ ಹೋಗಿ ನಿಂತು ನೋಡಿದರೆ ಅಲ್ಲಲ್ಲಿ ಕಪ್ಪು ಮತ್ತು ಬಿಳಿ ಹಕ್ಕಿಗಳ ಗುಂಪು ಕಾಣಿಸುತ್ತಿತ್ತು. ಜೊತೆಗೆ ಕ್ಯಾಮೆರಾ ಇದ್ದುದ್ದರಿಂದ ಅದರಲ್ಲಿ ಜೂಮ್ ಮಾಡಿ ನೋಡಿದ್ದರಿಂದ ಅದು ಹಕ್ಕಿಗಳ ದೊಡ್ಡ ಗುಂಪು ಎಂಬುದು ಸ್ಪಷ್ಟವಾಗುವಂತಿತ್ತು. ಇನ್ನೂ ಮುಂದೆ ಹೋಗುತ್ತಿದ್ದಂತೆ ಹಕ್ಕಿಗಳ ಗೂಡಿಗೆ ಹತ್ತಿರವಾದ ಕಟ್ಟಡ ಕಟ್ಟಿರುವುದರಿಂದ ಹತ್ತಿರದಿಂದಲೇ ನೋಡಬಹುದು.  ಇಲ್ಲಿ ಪ್ರಕೃತಿ  ಸವಿಯನ್ನು ಸವಿಯುವುದರ ಜೊತೆಗೆ ಸಾವಿರಾರು ಪಕ್ಷಿಗಳನ್ನು ನೋಡಿ ಮನ ತಣಿಸಿಕೊಳ್ಳಬಹುದು. ನೀವು ಪಕ್ಷಿ ಪ್ರಿಯರಾಗಿದ್ದು ವಿವಿಧ ರೀತಿಯ ಹಕ್ಕಿಗಳ ಪರಿಚಯ ನಿಮಗಿದ್ದಲ್ಲಿ ಇದು ಇನ್ನೂ ವಿಶೇಷವಾಗಿ ಕಾಣಿಸುವುದರಲ್ಲಿ ಅನುಮಾನವಿಲ್ಲ.ಸುಮಾರು 200 ಕ್ಕೂ ಹೆಚ್ಚು ರೀತಿಯ ಬೇರೆಬೇರೆ ಪ್ರಭೇದದ ಹಕ್ಕಿಗಳು ಇಲ್ಲಿ ಬಂದು ಸೇರುತ್ತವೆ ಎನ್ನಲಾಗುತ್ತದೆ. 

ಇಲ್ಲಿನ ಗದ್ದೆ ಮತ್ತು ಮರಗಳ ಕೆಳಗೆ ನೀರು ತುಂಬುವುದರಿಂದ ಅಕ್ಟೋಬರ್ ನಲ್ಲಿ ಬೇರೆಬೇರೆ ದೇಶದಿಂದ ಹಲವಾರು ಹಕ್ಕಿಗಳು ಇಲ್ಲಿ ಬರಲು ಪ್ರಾರಂಭವಾಗುತ್ತದೆ. ಮಳೆಗಾಲ ಮುಗಿದಾದ ಮೇಲೆ ಇಲ್ಲಿ ನೀರು ಸರಿಯಾಗಿ ತುಂಬುವುದರಿಂದ ಹಕ್ಕಿಗಳ ವಾಸಕ್ಕೆ ಇದು ಸರಿಯಾದ ಸ್ಥಳವಾಗುತ್ತದೆ ,ವಿವಿಧ ಹಕ್ಕಿಗಳು ಇಲ್ಲಿ ಒಟ್ಟಿಗೆ ಬಂದು ಸೇರುವುದನ್ನು ಆ ಹಕ್ಕಿಗಳ ಹಾರಾಟವನ್ನು ನೋಡುವುದೇ ಒಂದು ಸಂಭ್ರಮ. ಆದರೆ ಇತ್ತೀಚಿಗೆ ಪ್ರಕೃತಿಯಲ್ಲಿ ಆಗುತ್ತಿರುವ ಬದಲಾವಣೆ ಮತ್ತು ಮಳೆ ಕೂಡ ಕಡಿಮೆಯಾದ  ಕಾರಣ ಹಕ್ಕಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಅಲ್ಲಿನ ಉಸ್ತುವಾರಕರು ಹೇಳುತ್ತಾರೆ. ಈ ಬಾರಿ ಮಳೆ ಕಡಿಮೆಯಾದ್ದರಿಂದ ಹಕ್ಕಿಗಳು ಕೂಡ ಕಡಿಮೆ ಸಂಖ್ಯೆಯಲ್ಲಿ ಬಂದು ಸೇರಿದ್ದವು. 

ವೈಟ್ ಐಬಿಸ್ ,ಸ್ನೇಕ್ ಬರ್ಡ್ , ಲಿಟಲ್ ಎಗ್ರೆಟ್ , ಸ್ಪೂನ್ ಬಿಲ್ , ನೈಟ್ ಹೆರೋನ್ ,ಪಿನ್ ಟೈಲ್ ,ಕೂಟ್ ,ಪರ್ಪಲ್ ಮೆರಾನ್ , ಇಂಡಿಯನ್ ಮೆರಾನ್ ಇನ್ನೂ ಮುಂತಾದ ೨೫ ಕ್ಕೂ ಹೆಚ್ಚು ವಿವಿಧ ತಳಿಯ ಪಕ್ಷಿಗಳು ದೇಶ ವಿದೇಶದಿಂದ  ಬಂದು ಇಲ್ಲಿ ಸೇರುತ್ತವೆ. ನವೆಂಬರ್ ನಿಂದ ಫೆಬ್ರವರಿಯವರೆಗೆ ಇಲ್ಲಿ ಬಂದು ಸೇರುವ ಹಕ್ಕಿಗಳು ಫೆಬ್ರವರಿಯ ನಂತರ ಮತ್ತೆ ಹಾರಿ ವಲಸೆ ಹೋಗುತ್ತವೆ.  ಈ ಸಮಯದಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಹಕ್ಕಿಗಳು ಇಲ್ಲಿ ಬಂದು ಸೇರುತ್ತವೆ. 

ಚಳಿಗಾಲದಲ್ಲಿ ಹಕ್ಕಿಗಳು ಎಲ್ಲೆಲ್ಲಿಂದಲೋ  ವಲಸೆ ಬಂದು ಗೂಡು ಕಟ್ಟಿಕೊಂಡು ಮರಿ ಮಾಡುವ ಹಕ್ಕಿಗಳನ್ನು ನೋಡಿದರೆ ಅದ್ಬುತ ಎನಿಸುತ್ತದೆ. ಇಷ್ಟೇ ಅಲ್ಲದೆ ಸುಂದರವಾಗಿ ಸ್ವಚ್ಚತೆಯನ್ನು ಕಾಪಾಡಿಕೊಂಡು ಪಕ್ಷಿಗಳನ್ನು ಎತ್ತರದಿಂದ ನಿಂತು ನೋಡಿದರೆ ಸುಂದರವೆನಿಸುತ್ತವೆ.  ಪಕ್ಷಿ ವೀಕ್ಷಣೆಗೆ ಅನುಕೂಲವಾಗುವಂತೆ ಪ್ರವಾಸೋದ್ಯಮ ಇಲಾಖೆ ಉತ್ತಮ ವ್ಯಯಸ್ಥೆ ಮಾಡಿ ಕೊಟ್ಟಿರುವುದನ್ನು ಕೂಡ ಇಲ್ಲಿ ಕಾಣಬಹುದು .ಸಾಕಷ್ಟು ಎತ್ತರದ ಮರಗಳು ಇಲ್ಲಿರುವುದರಿಂದ ಮಂಗಗಳು ಕೂಡ ಇಲ್ಲಿ ಬೀಡು ಬಿಟ್ಟಿದ್ದು ಹೋದವರನ್ನು ತನ್ನ ಚೇಷ್ಟೆಯ  ಮೂಲಕ ಆಕರ್ಷಿಸುತ್ತದೆ. 

ಹಕ್ಕಿಗಳ ಮೇಲೆ ವಿಶೇಷ ಆಸಕ್ತಿ ಇರುವವರು ಅದನ್ನು ನೋಡಲೆಂದೇ ದೊಡ್ದ ಲೆನ್ಸ್ ಇರುವ ಕ್ಯಾಮೆರಾ ಹಿಡಿದುಕೊಂಡು ದೂರದಿಂದಲೇ ಒಂದೊಂದೇ ಹಕ್ಕಿಗಳ ಸೆರೆ ಹಿಡಿಯುತ್ತಿರುವುದನ್ನು ಇಲ್ಲಿ ಕಾಣಬಹುದು. ದೇಶ ವಿದೇಶಗಳಿಂದ ಸಾಕಷ್ಟು ಪಕ್ಷಿ ಪ್ರೇಮಿಗಳು ಇಲ್ಲಿ ಪ್ರತಿ ವರ್ಷ ಬರುತ್ತಾರೆ ಎನ್ನಲಾಗುತ್ತದೆ. 
ಭೇಟಿ ನೀಡಲು ಸರಿಯಾದ ಸಮಯ :-
ವಿವಿಧ ತಳಿಯ ಪಕ್ಷಿಗಳು ಚಳಿಗಾಲದಲ್ಲಿ ಇಲ್ಲಿ ವಲಸೆ ಬಂದು ಸೇರುವುದರಿಂದ ಅಕ್ಟೋಬರ್ ನಿಂದ ಡಿಸೆಂಬರ್ ಇಲ್ಲಿಗೆ ಭೇಟಿ ನೀಡಲು ಸರಿಯಾದ ಸಮಯ.  

ಮಾರ್ಗ :- ಬೆಂಗಳೂರಿನಿಂದ ಸಾಗರಕ್ಕೆ ನೇರ ರೈಲಿನಲ್ಲಿ ಬಂದು ಅಲ್ಲಿಂದ ಬಸ್ಸಿನ ಮೂಲಕ ಅಥವಾ ಕಾರಿನಲ್ಲಿ (ಸಾಗರದಿಂದ 60 ಕಿ ಮೀ )ತೆರಳಬಹುದು. ಸೊರಬದಿಂದ ಸುಮಾರು 15 ಕಿ ಮೀ ಅಂತರದಲ್ಲಿದ್ದು ಸೊರಬದಿಂದ ಕೂಡ ಕಾರು ಅಥವಾ ಬಸ್ಸಿನಲ್ಲಿ ತೆರಳಬಹುದು. ಇಲ್ಲಿಂದ ಹತ್ತಿರದಲ್ಲಿ ಬನವಾಸಿ ಕೂಡ ಇರುವುದರಿಂದ ಎರಡನ್ನೂ ಒಂದೇ ದಿನದಲ್ಲಿ ನೋಡಬಹುದು. 

ಹತ್ತಿರದ ಪ್ರವಾಸಿ ಸ್ಥಳಗಳು :-
ಸೊರಬ ಬನವಾಸಿ ಮಾರ್ಗವಾಗಿರುವ ಈ ಸ್ಥಳ ಬನವಾಸಿ ಮಧುಕೇಶವ ದೇವಾಲಯಕ್ಕೆ ಹತ್ತಿರವಾಗುತ್ತದೆ.  ಇಕ್ಕೇರಿ , ಕೆಳದಿ , ಜೋಗ್ ಫಾಲ್ಸ್ ಕೂಡ ಇಲ್ಲಿಗೆ ಹತ್ತಿರದ ಪ್ರಸಿದ್ಧ ಪ್ರವಾಸಿ ಸ್ಥಳಗಳು. 

Arpitha Harsha